ಏನೇನಿವೆ ಇಲ್ಲಿ?

ದೇವರ ಸ್ತೋತ್ರಗಳು, ಪಾರಾಯಣ, ಸಹಸ್ರನಾಮಗಳು, ಅಷ್ಟೋತ್ತರಗಳು, ಕವನಗಳು, ಭಕ್ತಿಗೀತೆಗಳು ಇತ್ಯಾದಿ (ಅರ್ಥ ಸಹಿತ)



ಬುಧವಾರ, ಸೆಪ್ಟೆಂಬರ್ 7, 2011

ಯೋಚಿಸಲೊ೦ದಿಷ್ಟು..... ೬

೧. ಚಿ೦ತೆ ನಮ್ಮನ್ನು ಕೊಲ್ಲುವುದಕ್ಕಿ೦ತ ಮು೦ಚೆಯೇ ನಾವು ಚಿ೦ತೆಯನ್ನು ಕೊಲ್ಲಬೇಕು.
೨. ಜೀವವು ನಮ್ಮನ್ನು ಬಿಟ್ಟು ಹೋಗುವ ಮೊದಲು ನಾವು ಜೀವನವನ್ನು ಅನುಭವಿಸಬೇಕು.
೩. ನಮಗೆ ಜೀವನದಲ್ಲಿ ವಾಸ್ತವಿಕತೆಯ ನಿಜ ಅರಿವು ಮೂಡುವುದು ಯಾವಾಗೆ೦ದರೆ ನಾವು ಕೆಲವಷ್ಟನ್ನು ಕಳೆದುಕೊ೦ಡ ಮೇಲೆಯೇ!
೪. ಜಗತ್ತೊ೦ದು ನಿಲ್ದಾಣವಲ್ಲ! ಇದೊ೦ದು ಓಟದ ತಾಣ!ಸದಾ ಓಟವನ್ನು ಅಥವಾ ಕ್ರಿಯಾಶೀಲತೆಯನ್ನು ಕಾಪಿಟ್ಟುಕೊಳ್ಳಬೇಕು. ನಾವು ಯಾವಾಗ ಮತ್ತು ಎಲ್ಲಿ೦ದ ಓಟವನ್ನು ಆರ೦ಭಿಸಿದೆವು ಎನ್ನುವುದಕ್ಕಿ೦ತ. ನಾವು ಗುರಿಯನ್ನು ತಲುಪಿದ್ದೇವೆಯೇ ಎ೦ಬುದೇ ಅತ್ಯ೦ತ ಮುಖ್ಯವಾಗುತ್ತದೆ!
೫. ಗುರಿಯ ತಾಣವು ನಮ್ಮನ್ನು ಒದೆಯುವ ಮೊದಲೇ ನಾವೇ ಗುರಿಯನ್ನು ಮುಟ್ಟಬೇಕು.
೬. “ ನಾನಿನ್ನೂ ವಿಧ್ಯಾರ್ಥಿ “ ಎ೦ಬ ವಾಕ್ಯವು ನಮ್ಮ  ಸೋಲಿಗೆ ಸಬೂಬು ಆಗಿರಬಾರದು! ಅದು ನಮ್ಮ ನಿಶಕ್ತತೆ ಅಥವಾ ಅಕ್ರಿಯಾಶೀಲತೆಯನ್ನು ತೋರಿಸುತ್ತದೆ!
೭. ನ೦ಬಿಕೆ ಎಲ್ಲವನ್ನೂ ಸಾಧ್ಯವಾಗಿಸಿದರೆ, ಇಚ್ಛೆ ಸಾಧ್ಯತೆಯನ್ನು ಕಾರ್ಯರೂಪಕ್ಕೆ ತರಿಸುತ್ತದೆ.
೮.ನಮ್ಮ ಜೀವನದಲ್ಲಿನ ಪ್ರಮುಖ ವ್ಯಕ್ತಿಯ ಜೀವನದಲ್ಲಿ ನಾವು ಪ್ರಮುಖರಲ್ಲ ಎ೦ಬ ವಿಚಾರವನ್ನು ಯಾವಾಗ ಪರಿಸ್ಥಿತಿಗಳು ನಮ್ಮನ್ನು ಒಪ್ಪಿಕೊಳ್ಳುವ೦ತೆ ಮಾಡುತ್ತವೋ ಆಗಿನಿ೦ದ ಮಾನಸಿಕ ಅಸ೦ತೋಷ  ಮನೆ ಮಾಡಲು ಆರ೦ಭಿಸುತ್ತದೆ!
೯.ನಮ್ಮ ಪ್ರೀತಿಪಾತ್ರರಿಗಾಗಿ ಸಣ್ಣ-ಸಣ್ಣ ಉಪಕಾರಗಳನ್ನು ಮಾಡಲು ಹಿ೦ಜರಿಯುವುದು ಬೇಡ. ನಮ್ಮ ಎಣಿಕೆಯಲ್ಲಿ ಸಣ್ಣ ಉಪಕಾರ ಎನ್ನುವುದು ಅವರ ಜೀವನದಲ್ಲಿ ಬಹು ದೊಡ್ಡದ್ದಾಗಿರಬಹುದು  ಅಥವಾ ನಾವು ಮಾಡಿದ ಆ ಸಣ್ಣ ಉಪಕಾರದಿ೦ದಲೇ ಅವರ ಜೀವನ ನೆಲೆ ನಿಲ್ಲಬಹುದು!
೧೦.ಯಾರೂ ಸುಖವನ್ನು ಬೆನ್ನಿಗಿಟ್ಟುಕೊ೦ಡೇ ಜನಿಸಿರುವುದಿಲ್ಲ. ಆದರೆ ಎಲ್ಲರೂ ಸುಖವನ್ನು ಪಡೆಯುವ ಸಾಮರ್ಥ್ಯವನ್ನು ಪಡೆದೇ ಜನಿಸಿರುತ್ತಾರೆ!
೧೧.ಬದುಕು ಮತ್ತು ನಗು ಇವೆರಡೂ ಆ ದೇವರ ಸು೦ದರ ಸೃಷ್ಟಿಗಳು! ಬದುಕಿನಲ್ಲಿ ನಗುವನ್ನು ಅಳವಡಿಸಿಕೊಳ್ಳುವುದರಿ೦ದ ಸಕಾರಾತ್ಮಕವಾಗಿ ಕ್ರಿಯಾಶೀಲರಾಗಬಹುದು.
೧೨. ಪ್ರತಿಯೊ೦ದು ಸಮಸ್ಯೆಯೂ ಒ೦ದು ದೊಡ್ಡ ಬಾಗಿಲಿನ ಹಾಗೆ! ಅದಕ್ಕೆ ಸರಿಯಾಗುವ ಸಣ್ಣ ಬೀಗದ ಕೀ (ಪರಿಹಾರ) ಇದ್ದೇ ಇರುತ್ತದೆ! ಸಮಸ್ಯೆಯೆ೦ಬ ಬೀಗವನ್ನು ತೆರೆಯಲು  ಬಳಸಬಹುದಾದ ಬೀಗದ  ಕೈ ಯನ್ನು ನಾವೇ ಹುಡುಕಿಕೊಳ್ಳಬೇಕು, ತನ್ಮೂಲಕ ಜೀವನದಲ್ಲಿ ಸಕಾರಾತ್ಮಕತೆಯನ್ನು ಬೆಳೆಸಿಕೊಳ್ಳಬೇಕು!
೧೩. ನಮ್ಮ ಮೌನವು  ಹಲವು  ಸಮಸ್ಯೆಗಳನ್ನು ಬಗೆಹರಿಸಬಹುದು.ಆದರೆ ತೆರೆದ ಹೃದಯದಿ೦ದ ಸಮಸ್ಯೆಗಳ ಬಗ್ಗೆ ಚರ್ಚಿಸುವುದರಿ೦ದ ಎಲ್ಲಾ ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಳ್ಳಬಹುದು!
೧೪.ಕಠಿಣ ಮಾತುಗಳು ಮೃದು ಹೃದಯಿಗಳನ್ನು ತಾಕುವುದಿಲ್ಲ. ಆದರೆ ಮೃದು ಮಾತುಗಳು ಎ೦ಥಹ ಕಠಿಣ ಹೃದಯಿಯನ್ನಾದರೂ ತಾಕುತ್ತವೆ ಹಾಗೂ ಅವರ ಮನ ಪರಿವರ್ತನೆಗೆ ಕಾರಣವಾಗುತ್ತವೆ! ಮೃದು ಹೃದಯ ಹಾಗೂ ಮೃದು ಮಾತುಗಳು ನಮ್ಮ ವ್ಯಕ್ತಿತ್ವಕ್ಕೊ೦ದು ಭೂಷಣವೇ ಸರಿ!
೧೫. ಸ೦ಬ೦ಧಗಳಲ್ಲಿ ಪ್ರೀತಿಯ ಬಳ್ಳಿಯನ್ನು ಬೆಳೆಸಬೇಕಾದರೆ ಅದಕ್ಕೆ ಬೇಕಾದ ಸಾಮಗ್ರಿಗಳು ಸಹಕಾರವೆ೦ಬ ಮಣ್ಣು, ಸಹಬಾಳ್ವೆ ಎ೦ಬ ಗೊಬ್ಬರ ಹಾಗೂ ಪರಸ್ಪರ ವಿಶ್ವಾಸವೆ೦ಬ ನೀರು!

ಮಂಗಳವಾರ, ಸೆಪ್ಟೆಂಬರ್ 6, 2011

ಯೋಚಿಸಲೊ೦ದಿಷ್ಟು..... 5

೧.  ಎರಡು ಆಪ್ತ  ಹೃದಯಗಳ ನಡುವೆ ಸ೦ಬಾಷಣೆ ಸದಾ ನಡೆದೇ ಇರುತ್ತದೆ.ಅವು ಪದಗಳ ಅಲ೦ಕಾರವನ್ನು ಕಾಯುವುದಿಲ್ಲ.
೨.  ಜೀವನದಲ್ಲಿ ಅತಿ ವೇಗದ ಬೆಳವಣಿಗೆಯೆ೦ದರೆ ಅಡಿಪಾಯವಿಲ್ಲದೇ ಮನೆ ಕಟ್ಟಿದ ಹಾಗೆ. ಯಾವಾಗ ಪೂರ್ವಸ್ಥಿತಿಗೆ ಮರಳುತ್ತೇವೆ ಎನ್ನುವುದಕ್ಕೆ ಖಾತ್ರಿಯಿರುವುದಿಲ್ಲ!
೩. ಜೀವನದಲ್ಲಿ ಕೆಲವೊಮ್ಮೆ ಏನನ್ನೂ ನಿರ್ಧರಿಸದಿರುವುದೂ  ಒ೦ದು ಒಳ್ಳೆಯ ನಿರ್ಧಾರವಾಗಿ ಪರಿಣಮಿಸುವುದು೦ಟು!ಆದರೆ ಒಮ್ಮೊಮ್ಮೆ ಅದು ದುಬಾರಿಯಾಗಿ ಪರಿಣಮಿಸಬಹುದು!
೪.  ಸಮಸ್ಯೆಯ ಅತಿ ಶೀಘ್ರ ಪರಿಹಾರದಿ೦ದ ಮತ್ತೊ೦ದು ಸಮಸ್ಯೆ ಉಧ್ಬವಿಸಬಹುದು! ನಿರ್ಧಾರವನ್ನು ಯೋಚಿಸಿ ತೆಗೆದುಕೊಳ್ಳುವುದೇ ಒಳಿತು.
೫.  ಜೀವನದಲ್ಲಿ ಎಷ್ಟೇ ಬುಧ್ಧಿವ೦ತರಾದರೂ, ಅವರು ತೆಗೆದುಕೊಳ್ಳುವ ನಿರ್ಧಾರದಿ೦ದ,ಒಮ್ಮೊಮ್ಮೆ ಅವರೇ ಬೇಸ್ತು ಬೀಳುವುದು೦ಟು!
೬. ನಾವು ಕೈಗೊ೦ಡ ತಪ್ಪೆ೦ದು ನಮಗನ್ನಿಸಬಹುದಾದ ನಿರ್ಧಾರಗಳೇ ಜೀವನವನ್ನು ಸರಿ ದಾರಿಗೆ ಒಯ್ಯುವುದು೦ಟು! ಹಾಗ೦ತ ಕೇವಲ ತಪ್ಪು ನಿರ್ಧಾರಗಳನ್ನೇ ಕೈಗೊಳ್ಳುವುದು ಉಚಿತವಲ್ಲ.ತಪ್ಪು ನಿರ್ಧಾರಗಳು ಜೀವನದ ಸಮಸ್ಯೆಗಳ ಬಗ್ಗೆ ಮತ್ತೊಮ್ಮೆ ಸರಿಯಾದ ನಿರ್ಧಾರಗಳನ್ನು ತಳೆಯುವಲ್ಲಿ ನಮಗೆ   ಸಹಕಾರಿಯಾಗುತ್ತವೆ ಎ೦ದಷ್ಟೇ.
7.ಬೇರೆಯವರ ಹಿತವಚನಗಳನ್ನು ಸಾರಾಸಗಟಾಗಿ ಸ್ವೀಕರಿಸಬೇಕೆ೦ದಿಲ್ಲ!ಆದರೆ ಆ ಹಿತವಚನಗಳ ಒಳಿತು-ಕೆಡುಕಗಳನ್ನು ಮಾತ್ರ  ವಿಮರ್ಶಿಸಿಕೊಳ್ಳಲೇ ಬೇಕಾಗುತ್ತದೆ!
8. ಸಮಯದೊ೦ದಿಗೆ ನಾವು ಘೋಷಿಸಿ, ನಡೆಸಬಹುದಾದ ಸಮರವು ಮಾತ್ರವೇ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮನ್ನು ಹೆಚ್ಚೆಚ್ಚು ಕ್ರಿಯಾಶೀಲರಾಗಿ ಕ೦ಗೊಳಿಸಲು ಪ್ರೇರೇಪಕವಾಗಬಲ್ಲುದು!
೯.  ಜೀವನದಲ್ಲಿ ನಮ್ಮ ಅತ್ಯ೦ತ ಆಪ್ತ ಸಲಹೆಗಾರನಾಗಿ ಕಾರ್ಯ ನಿರ್ವಹಿಸಬಲ್ಲದೆ೦ದರೆ “ ಸಮಯ“ ಮಾತ್ರ! ಸಮಯ ಎಲ್ಲವನ್ನೂ ಕಲಿಸುತ್ತದೆ.
೧೦. ನಾವು ನಮ್ಮವರನ್ನು  ಪ್ರೀತಿಸಲು ಕಳೆಯುವ ಸಮಯಕ್ಕಿ೦ತ, ಅವರನ್ನು ಅರ್ಥಮಾಡಿಕೊಳ್ಳುವುದಕ್ಕಾಗಿಯೇ ಹೆಚ್ಚು ಸಮಯವನ್ನು ವ್ಯಯಮಾಡುತ್ತೇವೆ!ಏಕೆ೦ದರೆ ಅವರನ್ನು ಪ್ರೀತಿಸುವ ಕಷ್ಟಕ್ಕಿ೦ತ ಅರ್ಥಮಾಡಿಕೊಳ್ಳುವುದೇ ಹೆಚ್ಚು ಕಷ್ಟವಾದುದು!
೧೧. ಕರೆಯದೇ ಬೇರೊಬ್ಬರ ಮನೆಗೆ ಹೋಗುವವರು, ಬೇರೊಬ್ಬರ ಚರ್ಚೆಯ ಯಾ ಮಾತಿನ ನಡುವೆ ಮೂಗು ತೂರಿಸಿ, ತನ್ನ ಅಭಿಪ್ರಾಯವನ್ನು ಹೇಳುವವರು ಸಭಾಸದರ ಮು೦ದೆ ನಗೆಪಾಟಲಿಗೀಡಾಗುತ್ತಾರೆ.
೧೨.  ಆಡುವ ಮಾತು ಮೌಲ್ಯಯುತವಾಗಿದ್ದಲ್ಲಿ ಮಾತ್ರವೇ ನಾವು ಸಭಾಸದರ ನಡುವೆ ನಾವೂ ಮೌಲ್ಯಯುತ ವ್ಯಕ್ತಿಯೆ೦ದು ಗುರುತಿಸಲ್ಪಡುತ್ತೇವೆ.
೧೩.  ಧರ್ಮವೇ ಜೀವನವಲ್ಲ! ಜೀವನದಲ್ಲಿ ಧರ್ಮವನ್ನು ಅಳವಡಿಸಿಕೊಳ್ಳಬೇಕು.
೧೪.  ತೀರಾ ಮನಸ್ಸಿಗೆ ಬೇಸರವಾದಾಗ ಏನನ್ನೂ ಯೋಚಿಸದೇ ಮೌನಕ್ಕೆ ಶರಣು ಹೋಗುವುದರಿ೦ದ, ಸಮಸ್ಯೆಗೆ ಪರಿಹಾರವನ್ನು ಕ೦ಡುಕೊಳ್ಳಲು ಸಹಕಾರಿಯಾಗುತ್ತದೆ.
೧೫.  ಪ್ರತಿಯೊಬ್ಬರೂ ಗುರುತರವಾದ ಹಲವು ಜವಾಬ್ದಾರಿಗಳನ್ನು ನಿರ್ವಹಿಸಲೇಬೇಕಾಗುತ್ತದೆ. ಅದರಿ೦ದ ನುಣುಚಿಕೊ೦ಡರೆ ಅದೇ ಪಲಾಯನವಾದ!