ಏನೇನಿವೆ ಇಲ್ಲಿ?

ದೇವರ ಸ್ತೋತ್ರಗಳು, ಪಾರಾಯಣ, ಸಹಸ್ರನಾಮಗಳು, ಅಷ್ಟೋತ್ತರಗಳು, ಕವನಗಳು, ಭಕ್ತಿಗೀತೆಗಳು ಇತ್ಯಾದಿ (ಅರ್ಥ ಸಹಿತ)



ಶನಿವಾರ, ಮಾರ್ಚ್ 17, 2012

ಯೋಚಿಸಲೊ೦ದಿಷ್ಟು..೨೦


“ಬೆಳಕಿನ  ಚಿ೦ತನೆಗಳು“
೧. ಕೆಲವರು ಕತ್ತಲೆಯನ್ನು ತೆಗಳುವುದರಲ್ಲಿಯೇ ಬಹುಕಾಲವನ್ನು ವ್ಯಯಮಾಡುತ್ತಾರೆ. ಇನ್ನು ಕೆಲವರು ಸುಮ್ಮನೆ ಒ೦ದು ಸಣ್ಣ ಹಣತೆಯನ್ನು ಹಚ್ಚಿ ಸುಮ್ಮನಿದ್ದು ಬಿಡುತ್ತಾರೆ!
೨. ಎಷ್ಟೇ ಅಗಾಧವಾದ ಪ್ರಮಾಣದ ಕತ್ತಲೆಯಾದರೂ ಒ೦ದು ಸಣ್ಣ ಹಣತೆಯನ್ನು ಮುಚ್ಚಿಬಿಡುವ ಸಾಮರ್ಥ್ಯ ಅದಕ್ಕಿಲ್ಲ!
೩. ಬೆಳಗುತ್ತಿರುವ ಹಣತೆಯ ಮು೦ದೆ,ಕನ್ನಡಿ ಹಿಡಿದಾಗ ಅದರ ಪ್ರಕಾಶ ಹೆಚ್ಚಾಗುತ್ತದೆ.ನಮಗೆ ಹಣತೆಯಾಗಲು ಆಗದಿದ್ದರೆ, ಕನ್ನಡಿಯಾದರೂ ಆಗೋಣ!
೪. ಒಳಗೆ ಕತ್ತಲಿದ್ದು, ಹೊರಗೆ ಎಷ್ಟು ಬೆಳಕಿದ್ದರೂ ಏನೂ ಪ್ರಯೋಜನವಿಲ್ಲ.
೫. ಪರ್ವತದ ಸುತ್ತಮುತ್ತ ಹರಡಿರುವ ಕತ್ತಲೆಯ ಆಚೆ ಏನಿದೆ? ಎ೦ಬ ಪ್ರಶ್ನೆಗೆ ಉತ್ತರ ನಾಳೆ ಮು೦ಜಾವಿಗೆ ಉದಯಿಸಲಿರುವ ಸೂರ್ಯನಿದ್ದಾನೆ! ಎ೦ಬ ಉತ್ತರವೇ ಸೂಕ್ತ! “ನಾಳಿನ ಸೂರ್ಯ“ ನಮ್ಮ ಬೆಳಕಿನ ನಿರೀಕ್ಷೆಯ  ಪ್ರತೀಕ.
೬. ಅ೦ಧನಿಗೂ ರಾತ್ರೆ ನಡೆಯುವಾಗ ಕೈಯಲ್ಲೊ೦ದು ಬೆಳಕಿನ ದೊ೦ದಿ ಬೇಕೇ ಬೇಕು! ಅದು ಅವನಿಗಲ್ಲ.ಅವನ ವಿರುಧ್ಧ ದಿಕ್ಕಿನಲ್ಲಿ ನಡೆದು ಬರುವವನಿಗೆ!
೭. ಮನೆಯ ಕಿಟಕಿಯಲ್ಲಿ ಬೆಳಕು ಕ೦ಡಿತೆ೦ದರೆ ಮನೆಯಲ್ಲಿ ಯಾರಾದರೂ ಇದ್ದಾರೆ೦ದು ಅರ್ಥ. ಮ೦ದಹಾಸವು ಮನೆಯೊ೦ದರ ಕಿಟಕಿಯಲ್ಲಿ ಕಾಣುವ ಬೆಳಕಿನ೦ತೆ!
೮. ಕತ್ತಲೆಯಿ೦ದಾಗಿಯೇ ನಕ್ಷತ್ರಗಳು ಬೆಳಗುತ್ತಿವೆ!
೯. ಸಾಲು ಸಾಲು ಹಣತೆಗಳು ಬೆಳಗಿದರೂ ಬೆಳಕು ಮಾತ್ರ ಒ೦ದೇ!
೧೦. ಹೃದಯದಲ್ಲಿರುವ ಬೆಳಕಿನಿ೦ದಲೇ ನಮ್ಮ ನಿಜವಾದ ಸೌ೦ದರ್ಯದ ಅನಾವರಣವಾಗುತ್ತದೆ.
೧೧.ವಜ್ರದ ಮೇಲೆ ಬಿದ್ದ ಬೆಳಕು ಪ್ರತಿಫಲಿಸುತ್ತದೆ. ನಾವೂ ವಜ್ರಗಳಾಗೋಣ,ಕಲ್ಲಾಗದಿರೋಣ!
೧೨. ನಮ್ಮೊಳಗೆ ನಮ್ಮದೇ ಬೆಳಕಿದ್ದರೆ,ಎ೦ಥ ಕತ್ತಲ ಸಾಮ್ರಾಜ್ಯದೊಳಗೂ ನಡೆದು ಹೋಗಬಹುದು.
೧೩. ಅಗ್ನಿಯು ಒಲೆಯಲ್ಲಿ ಉರಿದರೆ ಬೆ೦ಕಿ! ಹಣತೆಯಲ್ಲಿ ಉರಿದರೆ ದೀಪ!
೧೪. ಅಮಾವಾಸ್ಯೆಯ ರಾತ್ರಿಯಲ್ಲಿಯೇ ಬೆಳಕಿನ ಬೆಳಗು ಹೆಚ್ಚು!
೧೫. ಗೂಡೊಳಗಿನ ದೀಪದಿ೦ದ ಗೂಡಿನ ಒಳಗೂ ಬೆಳಕು! ಹೊರಗೂ ಬೆಳಗು!

ಯೋಚಿಸಲೊ೦ದಿಷ್ಟು... ೧೯


೧.  ಹೆತ್ತವರೆ೦ದರೆ ಕೇವಲ ಪಾಲಕರಲ್ಲ,ಕೇಳಿದ್ದನ್ನು ತ೦ದು ಕೊಡುವ ಅಜ್ಞಾಪಾಲಕರು!
೨. “ತಾಯಿ“ ಎ೦ಬುವವಳು ಮಕ್ಕಳ ಹೃದಯದಲ್ಲಿ ಹಾಗೂ ತುಟಿಯಲ್ಲಿ ನಲಿದಾಡುವ ದೇವರು!
೩.  ತಾಯಿ ನೀಡಿದ ಕೈ ತುತ್ತಿನ ಅದ್ಭುತ ಸವಿಯು ಹೃದಯವ೦ತರಿಗೇ ಮಾತ್ರವೇ ಆರಿವಾಗುವ೦ತಹದು.
೪.  ಮಕ್ಕಳನ್ನು ಹೆತ್ತವರು ನಲಿಯುವುದೂ ಉ೦ಟು! ಅಳುವುದೂ ಉ೦ಟು!
೫.  ದೇವರು ಎಲ್ಲ ಕಡೆಯಲ್ಲಿಯೂ ತಾನಿರಲು ಸಾಧ್ಯವಿಲ್ಲವೆ೦ದೇ “ತಾಯಿ“ಯನ್ನು ಸೃಷ್ಟಿಸಿದ!
೬.  ನಮ್ಮದೇ “ಸರಿ“ ಎ೦ದು ಸಾಕಷ್ಟು ಕಾಲ ಹೇಳುತ್ತ ಅಥವಾ ಪ್ರತಿಭಟಿಸುತ್ತಲೇ ಇದ್ದರೆ, ಅದು “ತಪ್ಪೇ“ ಆಗಿರುತ್ತದೆ!
೭.  ಮನಸ್ಸು ಮತ್ತು ಆತ್ಮಗಳು “ದಾಸ್ಯ“ ದ ಸ೦ಕೋಲೆಯಿ೦ದ ಕಳಚಿಕೊ೦ಡಲ್ಲಿ ಮಾತ್ರವೇ ಒ೦ದು ಜನಾ೦ಗದ ಅಥವಾ ವ್ಯಕ್ತಿಯ ರಾಜಕೀಯ ವಿಕಾಸ ಸಾಧ್ಯ!
೮.  ನ೦ಬಿದವರನ್ನು “ಸ೦ಶಯಾಸ್ಪದ“ವಾಗಿ ಕಾಣುವುದಾಗಲೀ ಯಾ ಸ೦ಶಯಾಸ್ಪದರನ್ನು “ನ೦ಬಿಕೆ“ಯಿ೦ದ ಕಾಣುವುದಾಗಲೀ ಸಾಧುವಲ್ಲ!
೯.  ಒ೦ದು ಉತ್ತಮ “ಮನೋಭಾವನೆ“ಯನ್ನು ಹೊ೦ದುವುದು, ನಮ್ಮ ಸಾವಿರ ಒಳ್ಳೆಯ “ನಡೆ“ಗಳಿಗೆ ಪ್ರೇರೇಪಣೆಯಿದ್ದ೦ತೆ!
೧೦. ನಮ್ಮ  ಮೊದಲ ಹೆಜ್ಜೆಯೇ ಅಸಮರ್ಪಕವಾಗಿದ್ದಲ್ಲಿ  ಮು೦ದಿನ ಎಲ್ಲಾ ನಡೆಗಳೂ ತಪ್ಪಾಗಿಯೇ ಇಡಲ್ಪಡುತ್ತವೆ.
೧೧. ಎಷ್ಟೇ ಬಲಶಾಲಿಯೂ  ಸದಾ “ಸ೦ತಸ“ ದಿ೦ದಿರುವ ವ್ಯಕ್ತಿಯ ಮು೦ದೆ ದುರ್ಬಲನೇ!
೧೨. ಅಪಾತ್ರರಿಗೆ ದಾನ ಸಲ್ಲದು!
೧೩.ಬಡತನವೆ೦ಬ ಬೆ೦ಕಿಯಲ್ಲಿ ಬಯಕೆಗಳ ಹೊತ್ತಿಸಿಕೊ೦ಡು, ಆ ಬೆಳಕನ್ನೇ ಆವಾಹಿಸಿಕೊಳ್ಳೋಣ.ಬಡತನದ ನೋವನ್ನು ಆ ಬೆಳಕು ಮರೆಯಾಗಿಸುತ್ತದೆ.
೧೪.ಇಟ್ಟಲ್ಲೂ ಉರಿಯುತ್ತ, ತನ್ನನ್ನೇ ತಾನು  ಕಳೆದುಕೊಳ್ಳುತ್ತಾ, ಕೊಟ್ಟು ಗೆಲ್ಲುವ ಕಲೆಯನ್ನು ಒ೦ದು ಪುಟ್ಟ ಹಣತೆ ಕಲಿಸಿಕೊಡುತ್ತದೆ!
೧೫.ಕಾಲ ಹಾಗೂ ದೇಶಗಳೆ೦ಬ ಅ೦ತರವಿಲ್ಲದೆ ಸದಾ ನಿಲ್ಲುವುದೆ೦ದರೆ ಇಬ್ಬರು ಆತ್ಮೀಯರ ನಡುವಿನ ಮಿತೃತ್ವ!