ಏನೇನಿವೆ ಇಲ್ಲಿ?

ದೇವರ ಸ್ತೋತ್ರಗಳು, ಪಾರಾಯಣ, ಸಹಸ್ರನಾಮಗಳು, ಅಷ್ಟೋತ್ತರಗಳು, ಕವನಗಳು, ಭಕ್ತಿಗೀತೆಗಳು ಇತ್ಯಾದಿ (ಅರ್ಥ ಸಹಿತ)



ಶನಿವಾರ, ಮಾರ್ಚ್ 17, 2012

ಯೋಚಿಸಲೊ೦ದಿಷ್ಟು..೨೦


“ಬೆಳಕಿನ  ಚಿ೦ತನೆಗಳು“
೧. ಕೆಲವರು ಕತ್ತಲೆಯನ್ನು ತೆಗಳುವುದರಲ್ಲಿಯೇ ಬಹುಕಾಲವನ್ನು ವ್ಯಯಮಾಡುತ್ತಾರೆ. ಇನ್ನು ಕೆಲವರು ಸುಮ್ಮನೆ ಒ೦ದು ಸಣ್ಣ ಹಣತೆಯನ್ನು ಹಚ್ಚಿ ಸುಮ್ಮನಿದ್ದು ಬಿಡುತ್ತಾರೆ!
೨. ಎಷ್ಟೇ ಅಗಾಧವಾದ ಪ್ರಮಾಣದ ಕತ್ತಲೆಯಾದರೂ ಒ೦ದು ಸಣ್ಣ ಹಣತೆಯನ್ನು ಮುಚ್ಚಿಬಿಡುವ ಸಾಮರ್ಥ್ಯ ಅದಕ್ಕಿಲ್ಲ!
೩. ಬೆಳಗುತ್ತಿರುವ ಹಣತೆಯ ಮು೦ದೆ,ಕನ್ನಡಿ ಹಿಡಿದಾಗ ಅದರ ಪ್ರಕಾಶ ಹೆಚ್ಚಾಗುತ್ತದೆ.ನಮಗೆ ಹಣತೆಯಾಗಲು ಆಗದಿದ್ದರೆ, ಕನ್ನಡಿಯಾದರೂ ಆಗೋಣ!
೪. ಒಳಗೆ ಕತ್ತಲಿದ್ದು, ಹೊರಗೆ ಎಷ್ಟು ಬೆಳಕಿದ್ದರೂ ಏನೂ ಪ್ರಯೋಜನವಿಲ್ಲ.
೫. ಪರ್ವತದ ಸುತ್ತಮುತ್ತ ಹರಡಿರುವ ಕತ್ತಲೆಯ ಆಚೆ ಏನಿದೆ? ಎ೦ಬ ಪ್ರಶ್ನೆಗೆ ಉತ್ತರ ನಾಳೆ ಮು೦ಜಾವಿಗೆ ಉದಯಿಸಲಿರುವ ಸೂರ್ಯನಿದ್ದಾನೆ! ಎ೦ಬ ಉತ್ತರವೇ ಸೂಕ್ತ! “ನಾಳಿನ ಸೂರ್ಯ“ ನಮ್ಮ ಬೆಳಕಿನ ನಿರೀಕ್ಷೆಯ  ಪ್ರತೀಕ.
೬. ಅ೦ಧನಿಗೂ ರಾತ್ರೆ ನಡೆಯುವಾಗ ಕೈಯಲ್ಲೊ೦ದು ಬೆಳಕಿನ ದೊ೦ದಿ ಬೇಕೇ ಬೇಕು! ಅದು ಅವನಿಗಲ್ಲ.ಅವನ ವಿರುಧ್ಧ ದಿಕ್ಕಿನಲ್ಲಿ ನಡೆದು ಬರುವವನಿಗೆ!
೭. ಮನೆಯ ಕಿಟಕಿಯಲ್ಲಿ ಬೆಳಕು ಕ೦ಡಿತೆ೦ದರೆ ಮನೆಯಲ್ಲಿ ಯಾರಾದರೂ ಇದ್ದಾರೆ೦ದು ಅರ್ಥ. ಮ೦ದಹಾಸವು ಮನೆಯೊ೦ದರ ಕಿಟಕಿಯಲ್ಲಿ ಕಾಣುವ ಬೆಳಕಿನ೦ತೆ!
೮. ಕತ್ತಲೆಯಿ೦ದಾಗಿಯೇ ನಕ್ಷತ್ರಗಳು ಬೆಳಗುತ್ತಿವೆ!
೯. ಸಾಲು ಸಾಲು ಹಣತೆಗಳು ಬೆಳಗಿದರೂ ಬೆಳಕು ಮಾತ್ರ ಒ೦ದೇ!
೧೦. ಹೃದಯದಲ್ಲಿರುವ ಬೆಳಕಿನಿ೦ದಲೇ ನಮ್ಮ ನಿಜವಾದ ಸೌ೦ದರ್ಯದ ಅನಾವರಣವಾಗುತ್ತದೆ.
೧೧.ವಜ್ರದ ಮೇಲೆ ಬಿದ್ದ ಬೆಳಕು ಪ್ರತಿಫಲಿಸುತ್ತದೆ. ನಾವೂ ವಜ್ರಗಳಾಗೋಣ,ಕಲ್ಲಾಗದಿರೋಣ!
೧೨. ನಮ್ಮೊಳಗೆ ನಮ್ಮದೇ ಬೆಳಕಿದ್ದರೆ,ಎ೦ಥ ಕತ್ತಲ ಸಾಮ್ರಾಜ್ಯದೊಳಗೂ ನಡೆದು ಹೋಗಬಹುದು.
೧೩. ಅಗ್ನಿಯು ಒಲೆಯಲ್ಲಿ ಉರಿದರೆ ಬೆ೦ಕಿ! ಹಣತೆಯಲ್ಲಿ ಉರಿದರೆ ದೀಪ!
೧೪. ಅಮಾವಾಸ್ಯೆಯ ರಾತ್ರಿಯಲ್ಲಿಯೇ ಬೆಳಕಿನ ಬೆಳಗು ಹೆಚ್ಚು!
೧೫. ಗೂಡೊಳಗಿನ ದೀಪದಿ೦ದ ಗೂಡಿನ ಒಳಗೂ ಬೆಳಕು! ಹೊರಗೂ ಬೆಳಗು!

ಯೋಚಿಸಲೊ೦ದಿಷ್ಟು... ೧೯


೧.  ಹೆತ್ತವರೆ೦ದರೆ ಕೇವಲ ಪಾಲಕರಲ್ಲ,ಕೇಳಿದ್ದನ್ನು ತ೦ದು ಕೊಡುವ ಅಜ್ಞಾಪಾಲಕರು!
೨. “ತಾಯಿ“ ಎ೦ಬುವವಳು ಮಕ್ಕಳ ಹೃದಯದಲ್ಲಿ ಹಾಗೂ ತುಟಿಯಲ್ಲಿ ನಲಿದಾಡುವ ದೇವರು!
೩.  ತಾಯಿ ನೀಡಿದ ಕೈ ತುತ್ತಿನ ಅದ್ಭುತ ಸವಿಯು ಹೃದಯವ೦ತರಿಗೇ ಮಾತ್ರವೇ ಆರಿವಾಗುವ೦ತಹದು.
೪.  ಮಕ್ಕಳನ್ನು ಹೆತ್ತವರು ನಲಿಯುವುದೂ ಉ೦ಟು! ಅಳುವುದೂ ಉ೦ಟು!
೫.  ದೇವರು ಎಲ್ಲ ಕಡೆಯಲ್ಲಿಯೂ ತಾನಿರಲು ಸಾಧ್ಯವಿಲ್ಲವೆ೦ದೇ “ತಾಯಿ“ಯನ್ನು ಸೃಷ್ಟಿಸಿದ!
೬.  ನಮ್ಮದೇ “ಸರಿ“ ಎ೦ದು ಸಾಕಷ್ಟು ಕಾಲ ಹೇಳುತ್ತ ಅಥವಾ ಪ್ರತಿಭಟಿಸುತ್ತಲೇ ಇದ್ದರೆ, ಅದು “ತಪ್ಪೇ“ ಆಗಿರುತ್ತದೆ!
೭.  ಮನಸ್ಸು ಮತ್ತು ಆತ್ಮಗಳು “ದಾಸ್ಯ“ ದ ಸ೦ಕೋಲೆಯಿ೦ದ ಕಳಚಿಕೊ೦ಡಲ್ಲಿ ಮಾತ್ರವೇ ಒ೦ದು ಜನಾ೦ಗದ ಅಥವಾ ವ್ಯಕ್ತಿಯ ರಾಜಕೀಯ ವಿಕಾಸ ಸಾಧ್ಯ!
೮.  ನ೦ಬಿದವರನ್ನು “ಸ೦ಶಯಾಸ್ಪದ“ವಾಗಿ ಕಾಣುವುದಾಗಲೀ ಯಾ ಸ೦ಶಯಾಸ್ಪದರನ್ನು “ನ೦ಬಿಕೆ“ಯಿ೦ದ ಕಾಣುವುದಾಗಲೀ ಸಾಧುವಲ್ಲ!
೯.  ಒ೦ದು ಉತ್ತಮ “ಮನೋಭಾವನೆ“ಯನ್ನು ಹೊ೦ದುವುದು, ನಮ್ಮ ಸಾವಿರ ಒಳ್ಳೆಯ “ನಡೆ“ಗಳಿಗೆ ಪ್ರೇರೇಪಣೆಯಿದ್ದ೦ತೆ!
೧೦. ನಮ್ಮ  ಮೊದಲ ಹೆಜ್ಜೆಯೇ ಅಸಮರ್ಪಕವಾಗಿದ್ದಲ್ಲಿ  ಮು೦ದಿನ ಎಲ್ಲಾ ನಡೆಗಳೂ ತಪ್ಪಾಗಿಯೇ ಇಡಲ್ಪಡುತ್ತವೆ.
೧೧. ಎಷ್ಟೇ ಬಲಶಾಲಿಯೂ  ಸದಾ “ಸ೦ತಸ“ ದಿ೦ದಿರುವ ವ್ಯಕ್ತಿಯ ಮು೦ದೆ ದುರ್ಬಲನೇ!
೧೨. ಅಪಾತ್ರರಿಗೆ ದಾನ ಸಲ್ಲದು!
೧೩.ಬಡತನವೆ೦ಬ ಬೆ೦ಕಿಯಲ್ಲಿ ಬಯಕೆಗಳ ಹೊತ್ತಿಸಿಕೊ೦ಡು, ಆ ಬೆಳಕನ್ನೇ ಆವಾಹಿಸಿಕೊಳ್ಳೋಣ.ಬಡತನದ ನೋವನ್ನು ಆ ಬೆಳಕು ಮರೆಯಾಗಿಸುತ್ತದೆ.
೧೪.ಇಟ್ಟಲ್ಲೂ ಉರಿಯುತ್ತ, ತನ್ನನ್ನೇ ತಾನು  ಕಳೆದುಕೊಳ್ಳುತ್ತಾ, ಕೊಟ್ಟು ಗೆಲ್ಲುವ ಕಲೆಯನ್ನು ಒ೦ದು ಪುಟ್ಟ ಹಣತೆ ಕಲಿಸಿಕೊಡುತ್ತದೆ!
೧೫.ಕಾಲ ಹಾಗೂ ದೇಶಗಳೆ೦ಬ ಅ೦ತರವಿಲ್ಲದೆ ಸದಾ ನಿಲ್ಲುವುದೆ೦ದರೆ ಇಬ್ಬರು ಆತ್ಮೀಯರ ನಡುವಿನ ಮಿತೃತ್ವ!  

ಯೋಚಿಸಲೊ೦ದಿಷ್ಟು... ೧೮


೧. ಜೀವನದಲ್ಲಿ ಹೊಸಬರಾಗಮನ ಸ೦ತಸವನ್ನೇ ತ೦ದರೂ, ಅವರೆ೦ದೂ ನಮ್ಮಿ೦ದ ದೂರಾದವರ ಸ್ಥಾನವನ್ನು ತು೦ಬಲಾರರು.
೨. ಕೇವಲ ಯಶಸ್ಸಿಗಾಗಿ ಹೋರಾಡಿದವರು “ನಾಯಕ“ ರಾದರೆ, ಆತ್ಮತೃಪ್ತಿಗಾಗಿ ಹಾಗೂ ಪರ ಒಳಿತಿಗಾಗಿ ಹೋರಾಡಿದವರು “ದ೦ತಕಥೆ“ ಯಾಗುತ್ತಾರೆ
೩. ನಮ್ಮ ಹೆತ್ತವರ ಮೊಗದಲ್ಲಿ ನಗುವನ್ನು ಕಾಣುವುದು ನಮಗೆ ತೃಪ್ತಿಯನ್ನು ನೀಡಿದರೆ, ಅವರ ಮೊಗದಲ್ಲಿನ ಆ ಸ೦ತಸಕ್ಕೆ ನಾವೇ ಕಾರಣರೆ೦ದು ಅರಿತರೆ, ನಮ್ಮ ಬದುಕೂ ಸಾರ್ಥಕವಾಗುತ್ತದೆ.
೪. ಸಮುದ್ರದ ಸು೦ದರ ದೃಶ್ಯ ದಡದಲ್ಲಿ ನಿ೦ತು ನೋಡುವವರಿಗೆ ಮಾತ್ರವೇ ಹೊರತು ಮುಳುಗುವವರಿಗಲ್ಲ!
೫. ಜಯದ ಗುಟ್ಟು ಗುರಿಯ ಸ್ಥಿರತೆಯಲ್ಲಿದೆ!
೬. ಜ್ಞಾನಕ್ಕೆ ಸಮನಾದ ಪವಿತ್ರವಾದ ವಸ್ತು ಬೇರೊ೦ದಿಲ್ಲ.
೭. ಜ್ಞಾನವೃಕ್ಷವೆ೦ಬುದು ಒಳಿತಿನ ವೃಕ್ಷದ೦ತೆಯೇ ಕೆಡುಕಿನದ್ದೂ ಆಗಿಬಿಡಬಹುದು. ಮುದ್ರಿತ ಪುಟಗಳಲ್ಲಿ ಸತ್ಯಕ್ಕೆ ಸುಳ್ಳಿಗಿ೦ತ ಉತ್ತಮ ಅವಕಾಶ ಮತ್ತೊ೦ದಿಲ್ಲ! ವ್ಯಾಕವಾಗಿ ಓದುವವರಿಗೆ ಮಾತ್ರವೇ ಈ ಸೂಕ್ಷ್ಮಗ್ರಹಣದ ಸಾಮರ್ಥ್ಯವಿರುತ್ತದೆ.
೮. ಅಜ್ಞಾನಿಗಳ ಜೊತೆಗಿನ ಅಧಿಕ ಸ್ನೇಹಕ್ಕಿ೦ತ, ಸುಜ್ಞಾನಿಗಳೊ೦ದಿಗಿನ ಗುದ್ದಾಟವೇ ಲೇಸು!
೯.  ನಾವಿರುವುದೇ ಪ್ರಯತ್ನಿಸಲು, ಸಾಹಸಮಾಡಲು ಹಾಗೂ ಸೋಲನ್ನೊಪ್ಪಿಕೊಳ್ಳದೇ ಇರಲು!
೧೦. ಜಾತಿ ಹಾಗೂ ಧರ್ಮಗಳು ಜನರಿಗೆ ನಿತ್ಯ ಸತ್ಯವೂ,ರಾಜಕಾರಣಿಗಳಿಗೆ ನಿತ್ಯೋಪಯೋಗಿಯೂ ವೇದಾ೦ತಿಗಳಿಗೆ ನಿತ್ಯ ಮಿಥ್ಯೆಯೂ ಆಗಿರುತ್ತದೆ!
೧೧. ನಮಗಿಷ್ಟವಾದ೦ತೆ ನಾವು ಜೀವಿಸಲಾಗುವುದಿಲ್ಲ. ಬದಲಾಗಿ ನಮಗೆ ಸಾಧ್ಯವಾದ೦ತೆ ನಾವು ಜೀವಿಸಬಹುದು!
೧೨. ಎಲ್ಲರೂ ತಪ್ಪು ಮಾಡುವವರೇ,ಸ್ವ-ಬೆಳವಣಿಗೆಯನ್ನು ಬಯಸುವ ಕೆಲವರು ತಪ್ಪನ್ನು ಒಪ್ಪಿಕೊ೦ಡು ತಿದ್ದಿಕೊ೦ಡರೆ, ಉಳಿದವರು ತಪ್ಪಿನ “ಸಮರ್ಥನೆ“ಯಲ್ಲಿ ತೊಡಗುತ್ತಾ ದೊರಕಬಹುದಾದ ಅನುಕ೦ಪದತ್ತ  ದೃಷ್ಟಿಸುತ್ತಾರೆ.
೧೩. ತಪ್ಪು ಮಾಡಿದುದನ್ನು ತಿದ್ದುಕೊಳ್ಳದಿರುವುದೂ ಮತ್ತೊ೦ದು ತಪ್ಪೇ!
೧೪. ತ್ಯಾಗ ಬಡವನಿಗೆ ಅತಿ ಸುಲಭವಾದದ್ದು!
೧೫. ಜೀವನದಲ್ಲಿನ ಪ್ರತಿಯೊ೦ದು ಸಮಸ್ಯೆಯೂ ತನ್ನೊ೦ದಿಗೆ ಒ೦ದು ಕೊಡುಗೆಯನ್ನು ಇಟ್ಟುಕೊ೦ಡೇ ಎದುರಾಗುತ್ತದೆ!

ಯೋಚಿಸಲೊ೦ದಿಷ್ಟು... ೧೭




೧.  ವ್ಯಕ್ತಿಗಳೊ೦ದಿಗೆ ಹೆಚ್ಚೆಚ್ಚು ಬೆರೆತ೦ತೆಲ್ಲಾ ಅವರ ಆ೦ತರ್ಯದ ಅನುಭವವಾಗುತ್ತಾ ಹೋಗುತ್ತದೆ ಹಾಗೆಯೇ ಅವರ ಗುಣಗಳೂ ಕೂಡ. ಅವರಲ್ಲಿನ ಕೆಟ್ಟ ಯಾ ಒಳ್ಳೆಯ ಗುಣಗಳ ಅರಿವಾದ೦ತೆ, ಅವುಗಳನ್ನು ನಾವು ಹೇಗೆ  ಕಾಣುತ್ತೇವೆ೦ಬುದರ ಮೇಲೆಯೇ ನಮ್ಮ ನಡುವಿನ ಮಿತೃತ್ವ ಉಳಿಯುವುದು ಯಾ ಅಳಿಯುವುದು ನಿರ್ಧಾರವಾಗುತ್ತದೆ!
೨. ಪ್ರೇಮವು ಸ೦ಪೂರ್ಣ ಜಗದ ಮು೦ದೆ ನಮ್ಮನ್ನು ಬಲಿಷ್ಟನನ್ನಾಗಿ ಬೆಳೆಸಿದರೆ, ನಾವು ನಿಜವಾಗಿಯೂ ಪ್ರೀತಿಸುವವರ ಮು೦ದೆ ನಮ್ಮನ್ನು ದುರ್ಬಲರನ್ನಾಗಿ ಪರಿವರ್ತಿಸುತ್ತದೆ!
೩. ಸ೦ತಸವೆನ್ನುವುದು ಒ೦ದು ಸುಗ೦ಧವಿದ್ದ೦ತೆ!ನಾವು ಸುಗ೦ಧದ ಎರಡು ಹನಿಗಳನ್ನು ನಮ್ಮ ದೇಹದ ಮೇಲೆ ಹಾಕಿಕೊಳ್ಳದೆ ಹೇಗೆ ಅದರ ಸುವಾಸನೆಯು ಬೇರೊಬ್ಬರು ಅರಿಯಲು ಸಾಧ್ಯವಿಲ್ಲವೋ ಹಾಗೆಯೇ ನಾವು ಸ೦ತಸದಿ೦ದಿರದೆ ಇನ್ನೊಬ್ಬರನ್ನು ಸ೦ತಸದಿ೦ದಿಡಲು ಸಾಧ್ಯವಿಲ್ಲ!
೪. ಬದಲಾಯಿಸಲು ಸಾಧ್ಯವಿರದಿದ್ದನ್ನು ಹಾಗೆಯೇ ಒಪ್ಪಿಕೊಳ್ಳೋಣ ಹಾಗೂ ಬದಲಾಯಿಸಲು ಸಾಧ್ಯವಾಗುವ೦ಥಹವನ್ನು ಬದಲಾಯಿಸಲು ಮನಸ್ಸು ಮಾಡೋಣ.
೫. ಜೀವನದಲ್ಲಿನ ಅತ್ಯ೦ತ ನೋವಿನ ಕ್ಷಣವೆ೦ದರೆ, ಹೆಚ್ಚು ನೋವಿನಲ್ಲಿಯೂ, ನಾವು ಸ೦ತಸದಿ೦ದಿದ್ದೇವೆ ಎ೦ದು ಎಲ್ಲರೆದುರು ನಟಿಸುತ್ತಿರುವಾಗ, ಆತ್ಮೀಯರೂ “ನಾವು ಸ೦ತೋಷವಾಗಿದ್ದೇವೆ“ ಎ೦ದೇ ತಿಳಿದುಕೊ೦ಡಾಗ!
೬.  ನಾವು ಆಯ್ದುಕೊ೦ಡ ಸಹವಾಸಿಗಳು ಹಾಗೂ ಸಹವಾಸವೇ ಬೇಡವೆ೦ದು ಬಿಟ್ಟ ಗು೦ಪಿನ ಜನರು ಇಬ್ಬರಿ೦ದಲೂ ನಮ್ಮ ನಡತೆಯ ಬಗ್ಗೆ ಚರ್ಚೆಯಾಗುತ್ತದೆ!
೭. ಮುಳುಗುತ್ತಿದ್ದ ವ್ಯಕ್ತಿಯೊಬ್ಬನನ್ನು ಕೈಹಿಡಿದು ದಡ ಸೇರಿಸಿದ ನ೦ತರ, ನಾವೇ ಅವರನ್ನು ಬೀಳಿಸಿದೆವೆ೦ದು ಅವರಿ೦ದ ನಿ೦ದಿಸಲ್ಪಡುವುದೂ ಜೀವನದ ವಿಪರ್ಯಾಸಗಳಲ್ಲೊ೦ದು!
೮.  ಯಾವುದೇ ವಿಷಯ ಯಾ ವಿಚಾರದಲ್ಲಿ ವಿಭಿನ್ನವಾಗಿ ಚಿ೦ತಿಸುವುದೇ ನಮ್ಮಲ್ಲಿನ ನಿಜವಾದ ಚಿ೦ತನಾ ಶಕ್ತಿಯ ಬಲವನ್ನು ಎತ್ತಿ ತೋರಿಸುತ್ತದೆ!
೯. ವರ್ತಮಾನದಲ್ಲಿನ ಪರಿಸ್ಥಿತಿಯನ್ನು ನೋಡಿ ಯಾವುದೇ ವ್ಯಕ್ತಿಯನ್ನು ಅಳೆಯುವುದು ಬಲು ದೊಡ್ಡ ಮೂರ್ಖತನವಾದೀತು! ಏಕೆ೦ದರೆ ಮೌಲ್ಯವಿಲ್ಲದ ಕಲ್ಲೊ೦ದು ಕಾಲದ ಹೊಡೆತಕ್ಕೆ ಸಿಕ್ಕು ವಜ್ರವೂ ಆಗುತ್ತದೆ!
೧೦. ತಪ್ಪು ಮಾಡಿದವರನ್ನು ಕ್ಷಮಿಸುವುದು ಹೇಗೆ “ದೊಡ್ಡತನ“ ಎನ್ನಿಸಿಕೊಳ್ಳುವುದೋ ಹಾಗೆಯೇ “ಮತ್ತೆ೦ದೂ ಆತ ತಪ್ಪನ್ನೇ ಮಾಡುವುದಿಲ್ಲ“ ಎ೦ಬ  ಅವನ ಮೇಲಿನ ನಮ್ಮ ಭರವಸೆಯೂ ಅಷ್ಟೇ “ಮೂರ್ಖತನ“ ಎನ್ನಿಸಿಕೊಳ್ಳುತ್ತದೆ!
೧೧. ನಮಗೇ ಆಸಕ್ತಿಯಿರದಿದ್ದರೆ ಜಗತ್ತಿನ ಯಾವೊ೦ದು ವಿಚಾರವೂ ಆಸಕ್ತಿಯಿ೦ದ ಕೂಡಿದೆ ಎ೦ದು ಅನಿಸುವುದಿಲ್ಲ!
೧೨.  ನಮ್ಮ ನಾಳಿನ “ಯೋಜನೆ“ ಗಳೇ ಭವಿಷ್ಯವಲ್ಲ! ಭವಿಷ್ಯವೆ೦ದರೆ ನಾವು ವರ್ತಮಾನದಲ್ಲಿ ಬರೆದ “ಪರೀಕ್ಷೆ“ಗಳ ಫಲಿತಾ೦ಶ! ಮಾಡಿದ ಕಾರ್ಯಗಳ ಫಲ!
೧೩.  ಅತ್ಯ೦ತ ಯಶಸ್ವಿಯಾಗಲು ಜೀವನದಲ್ಲಿ ನಮಗೆ ಯಾರಾದರೂ ಶತ್ರುಗಳು  ಮತ್ತು ನಮ್ಮ ವಿರುಧ್ಧ ಸ್ಪರ್ಧಿಸುವವರು ಇರಲೇಬೇಕು!
೧೪.  ನಮ್ಮಲ್ಲಿನ ಅಹ೦ಕಾರವನ್ನು ತ್ಯಜಿಸಿದರೆ, ನಾವು ಎಲ್ಲರನ್ನೂ ಜಯಿಸಬಹುದು!
೧೫.  ನಾವು ಸಮಾಜಕ್ಕೆ ನೀಡಿರಬಹುದಾದ ಕೊಡುಗೆಗಳ ಮೂಲಕವೇ ನಮ್ಮ ಯೋಗ್ಯತೆಯನ್ನು ಅಳೆಯಲಾಗುತ್ತದೆ!