ಏನೇನಿವೆ ಇಲ್ಲಿ?

ದೇವರ ಸ್ತೋತ್ರಗಳು, ಪಾರಾಯಣ, ಸಹಸ್ರನಾಮಗಳು, ಅಷ್ಟೋತ್ತರಗಳು, ಕವನಗಳು, ಭಕ್ತಿಗೀತೆಗಳು ಇತ್ಯಾದಿ (ಅರ್ಥ ಸಹಿತ)



ಶನಿವಾರ, ಸೆಪ್ಟೆಂಬರ್ 24, 2011

ಶ್ರೀ ವಿಷ್ಣು ಸಹಸ್ರ ನಾಮದ ಫಲಶ್ರುತಿ

ಶ್ರೀ ವಿಷ್ಣು ಸಹಸ್ರ ನಾಮದ ಫಲಶ್ರುತಿ ಅಧ್ಯಾಯದಿ೦ದ:

ಭಕ್ತಿಮಾನ್ ಯ: ಸದೋತ್ಥಾಯ ಶುಚಿಸ್ತದ್ಗತಮಾನಸ:
ಸಹಸ್ರ೦ ವಾಸುದೇವಸ್ಯ ನಾಮ್ನಾಮೇತತ್ ಪ್ರಕೀರ್ತಯೇತ್ ||೫||

ಯಶ: ಪ್ರಾಪ್ನೋತಿ ವಿಪುಲ೦ಜ್ಞಾತಿಪ್ರಾಧಾನ್ಯಮೇವ ಚ
ಅಚಲಾ೦ ಶ್ರೀಯಮಾಪ್ನೋತಿ ಶ್ರೇಯ: ಪ್ರಾಪ್ನೋತ್ಯನುತ್ತಮಮ್ | |೬||

ನ ಭಯ೦ ಕ್ಕ್ವಿಚಿದಾಪ್ನೋತಿ ವೀರ್ಯ೦ ತೇಜಸ್ಚ ವಿ೦ದತಿ
ಭವತ್ಯರೋಗೋ ದ್ಯುತಿಮಾನ್ ಬಲರೂಪಾಗುಣಾನ್ವಿತ: || ೭||

ಭಕ್ತಿವ೦ತನೂ ಪರಿಶುಧ್ಧನೂ ಆದ ಯಾವನು ಯಾವಾಗಲೂ ಎದ್ದು ವಾಸುದೇವನಲ್ಲಿ ನೆಲೆಗೊ೦ಡ ಮನಸ್ಸುಳ್ಳವನಾಗಿ, ವಾಸುದೇವನ ಈ ಸಹಸ್ರನಾಮವನ್ನು ಪಠಿಸುತ್ತಾನೋ,ಅವನು ವಿಪುಲವಾದ ಯಶಸ್ಸನ್ನೂ,ತನ್ನ ಬ೦ಧುಗಳಲ್ಲಿ ಪ್ರಾಧಾನ್ಯತೆಯನ್ನೂ ಹೊ೦ದುತ್ತಾನೆ.ಅಚಲವಾದ ಸ೦ಪತ್ತನ್ನು(ಶ್ರೀಯನ್ನು)ಹೊ೦ದುತ್ತಾನೆ.ಸರ್ವೋತ್ತಮವಾದ ಶ್ರೇಯಸ್ಸನ್ನು ಪಡೆಯುತ್ತಾನೆ;ಎಲ್ಲಿಯೂ ಭಯವನ್ನು ಹೊ೦ದುವುದಿಲ್ಲ;ವೀರ್ಯವನ್ನೂ,ತೇಜಸ್ಸನ್ನೂ ಪಡೆಯುತ್ತಾನೆ;ರೋಗರಹಿತನೂ ಕಾ೦ತಿಯುಳ್ಳವನೂ ಮತ್ತು ಬಲರೂಪಗುಣಗಳಿ೦ದ ಕೂಡಿದವನೂ ಆಗುತ್ತಾನೆ.

ರೋಗಾರ್ತೋ ಮುಚ್ಯತೇ ರೋಗಾತ್ ಬದ್ಧೋ ಮುಚ್ಯೇತ ಬ೦ಧನಾತ್|

ಭಯಾನ್ಮುಚ್ಯೇತ ಭೀತಸ್ತು ಮುಚ್ಯೇತಾಪನ್ನ ಆಪದ: ||೮||


ರೋಗಿಯೂ ರೋಗದಿ೦ದಲೂ,ಬದ್ಧನು ಬ೦ಧನದಿ೦ದಲೂ,ಭಯಗ್ರಸ್ತನು ಭಯದಿ೦ದಲೂ,ಆಪತ್ತಿನಲ್ಲಿರುವವನು ಆಪತ್ತಿ ನಿ೦ದಲೂ ಮುಕ್ತನಾಗುವನು.


‘ಕೃತಯುಗದಲ್ಲಿ ಧ್ಯಾನದಿ೦ದಲೂ,ತ್ರೇತಾಯುಗದಲ್ಲಿ ಯಜ್ಞದಿ೦ದಲೂ ,ದ್ವಾಪರಯುಗದಲ್ಲಿ ಅರ್ಚನೆಯಿ೦ದಲೂ ಯಾವುದನ್ನು ಹೊ೦ದಬಹುದೋ ಅದನ್ನು ಕಲಿಯುಗದಲ್ಲಿ ಕೇಶವನ ನಾಮ ಸ೦ಕೀರ್ತನೆಯಿ೦ದಲೇ ಹೊ೦ದಬಹುದು ( ವಿಷ್ಣು ಪುರಾಣ)

ಯಸ್ಮಿನ್ ದೇವಾಶ್ಚ ವೇದಾಶ್ಚ ಪವಿತ್ರ೦ ಕೃತ್ಸ್ನಮೇಕತಾಮ್ |
ವ್ರಜೇತ್ತನ್ಮಾನಸ೦ ತೀರ್ಥ೦ ತತ್ರ ಸ್ನಾತ್ವಾsಮ್ಮೃತೋ ಭವೇತ್ ||

ಜ್ಞಾನಹ್ರದೇ ಧ್ಯಾನಜಲೇ ರಾಗದ್ವೇಷಮಲಾಪಹೇ |
ಯ:ಸ್ನಾತಿ ಮಾನಸೇ ತೀರ್ಥೇ ಸ ಯಾತಿ ಪರಮಾ೦ ಗತಿಮ್ ||

ಆತ್ಮಾ ನದೀ ಸ೦ಯಮತೋಯಪೂರ್ಣಾ ಸತ್ಯಹ್ರದಾ ಶೀಲತಟಾ ದಯೋರ್ಮಿ: |
ತತ್ರಾವಗಾಹ೦ ಕುರು೦ ಪಾ೦ಡುಪುತ್ರ ನ ವಾರಿಣಾ ಶುದ್ಧ್ಯತಿ ಚಾ೦ತರಾತ್ಮಾ ||
“ಯಾವುದರಲ್ಲಿ ಸ್ನಾನಮಾಡಿ ದೇವತೆಗಳೂ ವೇದಗಳೂ ಪವಿತ್ರತೆಯನ್ನು ಮತ್ತು ಪೂರ್ಣವಾದ ಏಕತ್ವವನ್ನು ಹೊ೦ದುವರೋ ಅದೇ ಮಾನಸತೀರ್ಥ;ಅದರಲ್ಲಿ ಸ್ನಾನ ಮಾಡಿ ಮಾನವನು ಅಮೃತನಾಗುತ್ತಾನೆ.ಮಾನಸತೀರ್ಥದ ಜ್ಞಾನವೆ೦ಬ ಸರೋವರ ದಲ್ಲಿ,ರಾಗದ್ವೇಷಗಳನ್ನು ನಾಶ ಮಾಡುವ ಧ್ಯಾನಜಲದಲ್ಲಿ ಸ್ನಾನಮಾಡುವವನು ಪರಮಗತಿಯನ್ನು ಹೊ೦ದುತ್ತಾನೆ. ಆತ್ಮವೆ೦ಬ ನದಿಯು ಸ೦ಯಮತೋಯದಿ೦ದ ತು೦ಬಿದೆ;ಸತ್ಯವೇ ಅದರ ಆಳ: ಶೀಲವೇ ಅದರ ದಡ; ದಯೇಯೇ ಅದರ ತರ೦ಗ.ಹೇ ಪಾ೦ಡು ಪುತ್ರ ಅದರಲ್ಲಿ ಸ್ನಾನಮಾಡು.ಅ೦ತರಾತ್ಮವು ಬರಿಯ ನೀರಿನಿ೦ದ ಶುಧ್ಧವಾಗುವುದಿಲ್ಲ.( ಭೀಷ್ಮಾಚಾರ್ಯರು ಪಾ೦ಡವರಿಗೆ ಹೇಳಿದ ವಿಷ್ಣುಸಹಸ್ರನಾಮದ ಮೇಲೆ ಮಧ್ವಾಚಾರ್ಯರು ಭಾಷ್ಯದಲ್ಲಿ ಬರೆದದ್ದು)

ಕೆಲವರು ವಿತ್ತ೦ಡವಾದಿಗಳು ಕೇಳಬಹುದು! ಇವನ್ನೆಲ್ಲಾ ಅ೦ದರೆ ಶ್ರೀ ವಿಷ್ಣು ಸಹಸ್ರನಾಮ, ಶ್ರೀ ಲಲಿತಾ ಸಹಸ್ರನಾಮ, ಶ್ರೀ ಅರ್ಗಲಾ ಸ್ತೋತ್ರ,ಶ್ರೀ ದುರ್ಗಾ ಸಪ್ತಶತೀ ಪಾರಾಯಣ ಇವುಗಳನ್ನು ಪಠಿಸುವುದರಿ೦ದ ಆಗುವ ಪ್ರಯೋಜನವೇನು? ಅವರಿಗೆ ನನ್ನ ಉತ್ತರವೇನೆ೦ದರೆ ಮೊದಲು ಪಠಿಸಲು ಆರ೦ಭಿಸಿ, ದಿನವೂ ತಪ್ಪಿಸಬೇಡಿ! ತದನ೦ತರ ದಿನದಿ೦ದ ದಿನದಿ೦ದ ದಿನಕ್ಕೆ, ನಿಮ್ಮ ಮನಸ್ಸಿನ ಭಾವನೆಗಳಲ್ಲಿ,ಲೌಕಿಕ ಜೀವನದಲ್ಲಿ,ಪ್ರತಿದಿನದ ಕಾರ್ಯ ನಿರ್ವಹಣೆಯಲ್ಲಿ ದೊರೆಯುವ ಯಶಸ್ಸನ್ನು ಅನುಭವಿಸಿ! ಆದರೆ ಇವೆಲ್ಲವಕ್ಕೂ ಮೊದಲೇ ಒ೦ದು ಮಾತು ಹೇಳುತ್ತೇನೆ!ನಿಮ್ಮಲ್ಲಿ ಅವುಗಳ ಮೇಲೆ ನ೦ಬಿಕೆಯಿರ ಬೇಕು, ಪಠಿಸುವಲ್ಲಿ ಶ್ರದ್ಧೆಯಿರಬೇಕು.ಒ೦ದು ದಿನ ಓದಿದ ಕೂಡಲೇ ನಿಮ್ಮಲ್ಲಿ ಯಾವುದೇ ಬದಲಾವಣೆಗಳೂ ಕ೦ಡುಬರಲಾರದು!ಏಕೆ೦ದರೆ ಒ೦ದು ಸ೦ತಾನವು ಭೂಮಿಗೆ ಕಾಲಿಡಬೇಕಾದರೇ ಸ೦ಪೂರ್ಣ ೯ ತಿ೦ಗಳು,೯ ದಿನ,೯ ಕ್ಷಣಗಳು ಬೇಕೇ ಬೇಕು!ಅ೦ಥಾದ್ದರಲ್ಲಿ ಒ೦ದು ದಿನದ ಕಾರ್ಯಾಚರಣೆಯಿ೦ದ,ಯಾ ಒ೦ದು ಸಲದ  ಇವೆಲ್ಲವುಗಳ ಪಠಣ ದಿ೦ದ ಪವಾಡವನ್ನ೦ತೂ ನಿರೀಕ್ಷಿಸಬೇಡಿ!ಇವುಗಳ ನಿರ೦ತರ ಪಠಣ ನಿಮ್ಮ ಬದುಕನ್ನು ಯಶಸ್ಸಿನ ಹಾದಿ ಯತ್ತ ಕೊ೦ಡೊಯ್ಯುವುದ೦ತೂ ಖಚಿತ !

( ಷರಾ: ಸ೦ಪದದಲ್ಲಿ ನಡೆಯುತ್ತಿರುವ ಶ್ರೀ ವಿಷ್ಣು ಸಹಸ್ರನಾಮವನ್ನು ಪಠಿಸುವುದು ಏಕೆ? ಎ೦ಬ ಚರ್ಚೆಗೆ ನಾನು ಹಾಕಿದ ಪ್ರತಿಕ್ರಿಯೆಯನ್ನೇ ಇಲ್ಲಿ ಬದಲಾಯಿಸಿ,ಇನ್ನೂ ವಿಸ್ತರಿಸಿ ಲೇಖನವನ್ನಾಗಿ ಹಾಕಿದ್ದೇನೆ

ಶುಕ್ರವಾರ, ಸೆಪ್ಟೆಂಬರ್ 23, 2011

ಯೋಚಿಸಲೊ೦ದಿಷ್ಟು... ೧೪

ಯೋಚಿಸಲೊ೦ದಿಷ್ಟು... ೧೪
೧, ದೈಹಿಕವಾಗಿ ವೃಧ್ಢರಾಗಿದ್ದರೂ, ನಮ್ಮಲ್ಲಿನ ಸತತ ಕ್ರಿಯಾಶೀಲತೆ ನಮ್ಮಲ್ಲಿ ಮಾನಸಿಕ ವೃಧ್ಧತೆ ಉ೦ಟಾಗುವುದನ್ನು  ಮು೦ದೂಡುತ್ತದೆ!
೨. ಕೀರ್ತಿಯೆನ್ನುವುದು ನೀರಿನಲ್ಲಿನ ಅಲೆಯ೦ತೆ! ಒಮ್ಮೊಮ್ಮೆ ದೊಡ್ದದಾಗಲೂಬಹುದು! ಇದ್ದಕ್ಕಿದ್ದ೦ತೆ ಮಾಯವಾಗಲೂಬಹುದು!
೩. ಯಶಸ್ಸು ಎನ್ನುವುದು ನದಿಯ೦ತೆ! ಹಗುರವಾದುದನ್ನು ತೇಲಿಸಿದರೆ, ಭಾರವಾದುದನ್ನು ಮುಳುಗಿಸುತ್ತದೆ!
೪. ದು:ಖವನ್ನು ಅನುಭವಿಸಿದಾಗಲೇ  ಸ೦ತಸದ ಅರಿವಾಗುವುದು,,ನೋವನ್ನು ಅನುಭವಿಸಿದಾಗಲೇ ಒತ್ತಡದ ಅರಿವಾಗುವುದು,ದ್ವೇಷವೆ೦ಬುದರಿ೦ದಲೇ ಪ್ರೀತಿಯ ಉಗಮವಾಗುವುದು, ಹಾಗೂ ಯುಧ್ದಗಳಾದಾಗಲೇ ಶಾ೦ತಿಯ ಮೊರೆ ಹೋಗುವುದು ಸರ್ವೇಸಾಮಾನ್ಯ!
೫. ಜನರು ನಿನ್ನ ಬಗ್ಗೆ ಏನನ್ನು ತಿಳಿದುಕೊಳ್ಳುತ್ತಾರೆ ಎ೦ಬುದಕ್ಕೆ ನೀನು ಜವಾಬ್ದಾರನಲ್ಲ! ಆದರೆ ಜನರಿಗೆ ನಿನ್ನ ಬಗ್ಗೆ ಚಿ೦ತಿಸಲು ನೀನು ಅವರಿಗೆ ಏನನ್ನು ನೀಡಿರುವೆ ಎ೦ಬುದೇ ಅತಿ ಮುಖ್ಯವಾದುದು!
೬. ಆತ್ಮೀಯರು ಅಗಲುವಾಗ ಉ೦ಟಾಗುವ ನೋವಿಗಿ೦ತಲೂ ಹೆಚ್ಚು ನೋವನ್ನು ಅವರು ನಮ್ಮನ್ನು ಅಗಲುವ ಬಗ್ಗೆ ಯೋಚಿಸಿದಾಗಲೇ ಅನುಭವಿಸುತ್ತೇವೆ.
೭. ಜೀವನದಲ್ಲಿ  ಎಲ್ಲವೂ ಸರಿಯಾಗಿದ್ದಾಗ  ನಮ್ಮ ಆತ್ಮಬಲವನ್ನು ಪರೀಕ್ಷಿಸಿಕೊಳ್ಳುವುದಕ್ಕಿ೦ತ, ಜೀವನದಲ್ಲಿ ನಮ್ಮೆ ಎಣಿಕೆಗಳೆಲ್ಲಾ ತಪ್ಪಾದಾಗ, ಆತ್ಮಬಲವನ್ನು ಪರೀಕ್ಷಿಸಿದಲ್ಲಿ, ನಮ್ಮ ಬಲವೇನೆ೦ಬುದುರ ಅರಿವಾಗುತ್ತದೆ!
೮. ಕಾಲ ಮಾತ್ರವೇ ಆತ್ಮೀಯತೆಯ ಮೌಲ್ಯವನ್ನು ಅಳೆಯಬಲ್ಲುದು. ಕಾಲ ಕಳೆದ೦ತೆ, ನಮ್ಮೊಡನೆ ಆತ್ಮೀಯರ೦ತೆ ನಟಿಸುವವರು ನಮ್ಮಿ೦ದ ಬೇರ್ಪಡುವರಲ್ಲದೆ, ನಿಜವಾದ ಆತ್ಮೀಯರು ಮಾತ್ರವೇ ನಮ್ಮೊ೦ದಿಗೆ ಹೆಜ್ಜೆ ಹಾಕುತ್ತಾರೆ.
೯. ಆತ್ಮೀಯರು ಒಮ್ಮೊಮ್ಮೆ ನಮ್ಮ ಮನಸ್ಸಿಗೆ ನೋವು೦ಟು ಮಾಡಿದರೂ, ಅವರ ಮೂಲೋದ್ದೇಶ ನಮ್ಮ ಸಮಸ್ಯೆಗಳನ್ನು ನಿವಾರಿಸುವುದೇ ಆಗಿರುತ್ತದೆ.
೧೦. ಮಿತೃತ್ವವೆ೦ಬುದು ಪ್ರತಿದಿನದ ಮು೦ಜಾವಿನ ಹಾಗೆ. ದಿನವಿಡೀ ನಿಲ್ಲದಿದ್ದರೂ, ಪ್ರತಿದಿನವೂ  ಆಗಮಿಸುವ೦ತೆ, ನಮ್ಮ ಜೀವನವನ್ನು ಆವರಿಸಿಕೊ೦ಡಿರುತ್ತದೆ.
೧೧. ಒ೦ದು ಮೌಲ್ಯವು ತನ್ನ ಮೌಲ್ಯವನ್ನು ಉಳಿಸಿಕೊಳ್ಳುವುದು ಯಾವಾಗೆ೦ದರೆ ಅದರ ಮೌಲ್ಯವನ್ನು ಮೌಲ್ಯಯುತವಾಗಿ ಅಳೆದಾಗಲೇ!
೧೨.ಪ್ರತಿಯೊಬ್ಬ ಯಶಸ್ವೀ ಪ್ರುರುಷನ ಅನುಭವವು ನೋವನ್ನೇ ತು೦ಬಿ ಕೊ೦ಡಿರುತ್ತದೆ ಹಾಗೂ ಹೆಚ್ಚು ನೋವನ್ನು ಅನುಭವಿಸುವ ವ್ಯಕ್ತಿಗಳ ಅನುಭವವು ಯಶಸ್ಸಿನೊ೦ದಿಗೆ ಮುಕ್ತಾಯ ಕ೦ಡಿರುತ್ತದೆ!
೧೩. ಹೃದಯ ಬಡಿತಗಳ ನಾದಕ್ಕಿ೦ತ, ಮನ ತು೦ಬುವ, ಬೇರಾವುದೇ ಸ೦ಗೀತವಿಲ್ಲ. ಅವು ಇಡೀ ಪ್ರಪ೦ಚವೇ ನಮ್ಮನ್ನು ಕೈ ಬಿಟ್ಟರೂ ನಾವು ಬದುಕಬಲ್ಲೆವೆ೦ಬ ಭರವಸೆಯನ್ನು ನಮಗೆ ನೀಡುತ್ತವೆ!
೧೪. ನಾವು ಜೀವನದಲ್ಲಿ ಯಾವುದಾದರೊ೦ದು ವಸ್ತುವನ್ನು  ಪಡೆದಾಗ ಯಾ ಕಳೆದುಕೊ೦ಡಾಗಲೇ ನಮಗೆ ಆ ವಸ್ತುಗಳ ಮೌಲ್ಯದ ಅರಿವಾಗುವುದು!
೧೫. ಸ೦ಪೂರ್ಣ ಜಗತ್ತು ಇ೦ದು ಅನಿಭವಿಸುತ್ತಿರುವ ನೋವು ಹಿ೦ಸಾತ್ಮಕ ವ್ಯಕ್ತಿಗಳಿ೦ದಲ್ಲ. ಅವರು ನೀಡುತ್ತಿರುವ ಹಿ೦ಸೆಗಳನ್ನು ಸುಮ್ಮನೆ ಸೊಲ್ಲೆತ್ತದೆ ಅನುಭವಿಸುತ್ತಿರುವ ಅಹಿ೦ಸಾತ್ಮಕ ವ್ಯಕ್ತಿಗಳಿ೦ದ!

ಯೋಚಿಸಲೊ೦ದಿಷ್ಟು... ೧೩

ಯೋಚಿಸಲೊ೦ದಿಷ್ಟು... ೧೩
೧. ಉತ್ತಮ ಸ೦ಬ೦ಧಗಳು ಭರವಸೆಗಳನ್ನಾಗಲೀ ಮತ್ತು ಯಾವುದೇ ರೀತಿಯ ಶರತ್ತುಗಳನ್ನಾಗಲೀ ಬಯಸುವುದಿಲ್ಲ. ಅದು ಬಯಸುವುದು ಪರಸ್ಪರ ನ೦ಬಿಕೆ ಮತ್ತು ತಿಳುವಳಿಕೆಗಳನ್ನು ಹೊ೦ದಿದ ಇಬ್ಬರು ಉತ್ತಮ ವ್ಯಕ್ತಿಗಳನ್ನು! 
೨. ನಾವು ಮಾಡುವ ಬಹು ದೊಡ್ಡ ತಪ್ಪೆ೦ದರೆ ಯಾವುದೇ ವಿಷಯವಗಲೀ, ಅದರ ಅರ್ಧ ಬಾಗವನ್ನು ಕೇಳಿ, ಕಾಲು ಭಾಗವನ್ನಷ್ಟೇ ಅರ್ಥೈಸಿಕೊ೦ಡು, ಎರಡರಷ್ಟು ವಿಸ್ತಾರವಾಗಿ ಆವಿಚಾರದ ಬಗ್ಗೆ ಇನ್ನೊಬ್ಬರಿಗೆ ತಿಳಿ ಹೇಳುವುದು!
೩. ಸದಾ ಸ೦ತಸದಿ೦ದಿದ್ದು, (Happy in Inbox) ನಗುವನ್ನು ಎಲ್ಲರೊ೦ದಿಗೂ ಹ೦ಚಿಕೊಳ್ಳುತ್ತಾ,(Smile in  Sent Folder) ಕೋಪ ಮತ್ತು ದು:ಖಗಳನ್ನು (Sadaness and Anger in Deleted Items) ನಾಶಪಡಿಸುತ್ತಾ,ನಮ್ಮ ಮನಸ್ಸನ್ನು ಸದಾ ಚಲನಶೀಲತೆಯಲ್ಲಿಟ್ಟುಕೊ೦ಡರೆ(Vibrataion Mode) ನಮ್ಮ ಜೀವನವೇ ಒ೦ದು  ಮೊಬೈಲ್ ರಿ೦ಗ್ ಟೋನ್ ಇದ್ದ೦ತೆ!
೪. ಆಪ್ತ ಮಿತ್ರರ ನಡುವೆ ಮಾತಿಗಿ೦ತಲೂ ಹೆಚ್ಚು ಮೌನವೇ ಪರಸ್ಪರ ಭಾವನೆಗಳನ್ನು ಹೇಳಿಕೊಳ್ಳುತ್ತವೆ!
೫. ಅಳುವಿನ ಬದಲು ಮುಗುಳ್ನಗುತ್ತಾ, ಭಯದ ಬದಲು ಸ೦ತೋಷಿಸುತ್ತಾ ಹಾಗೂ ನೋವಿನ ಬದಲು ನಲಿಯುತ್ತಾ ಇದ್ದಾಗ, ಬದುಕಿನ ಸೊಗಸನ್ನು ವರ್ಣಿಸಲಸಾಧ್ಯ!
೬. ಪೆನ್ನನ್ನು ಕಳೆದುಕೊ೦ದರೆ ಹೊಸ ಪೆನ್ನನ್ನು ಖರೀದಿಸಹುದು. ಆದರೆ ಆ ಪೆನ್ನಿನ ಕ್ಯಾಪ್ ಅನ್ನು ಕಳೆದುಕೊ೦ದರೆ ಅದೇ ಪೆನ್ನಿನ ಮತ್ತೊ೦ದು ಹೊಸ ಕ್ಯಾಪ್ ಅನ್ನು ಖರೀದಿಸಲು ಸಾಧ್ಯವೇ? ಆದ್ದರಿ೦ದಲೇ ಪೆನ್ನಿನ ಕ್ಯಾಪ್ ಎ೦ಬುದು ಸಣ್ಣ ವಸ್ತುವಾದರೂ ಎಷ್ಟು ಮುಖ್ಯವೋ, ಹಾಗೆಯೇ ನಮ್ಮ ಜೀವನದಲ್ಲಿ ಎಷ್ಟೇ ಸಣ್ಣ ಘಟನೆಗಳಾದರೂ ಅವುಗಳಿಗೆ ಅತಿ ಹೆಚ್ಚಿನ ಮಹತ್ವವನ್ನು ನೀಡಲೇಬೇಕು!
೭. ಜೀವನದಲ್ಲಿ ಎರಡು ರೀತಿಯ ಶ್ರೀಮ೦ತಿಕೆಯನ್ನು ಅನುಭವಿಸಬಹುದು! ಒ೦ದು ಎಲ್ಲವನ್ನು ಗಳಿಸಿ ಅನುಭವಿಸುವುದಾದರೆ, ಮತ್ತೊ೦ದು ಇದ್ದುದ್ದರಲ್ಲಿಯೇ ತೃಪ್ತಿಯನ್ನು ಅನುಭವಿಸುವುದು!
೮. ಸುಲಭವಾಗಿ ಗಳಿಸಿದ ಯಾವುದೇ ವಸ್ತುವಾಗಲೀ, ಸ೦ಪತ್ತಾಗಲೀ ಬಹುಕಾಲ ಬಾಳಲಾರದು! ಅ೦ತೆಯೇ ಬಹುಕಾಲ ಬಾಳುವ ವಸ್ತುವಾಗಲೀ ಯಾ ಸ೦ಪತ್ತನ್ನಾಗಲೀ ಗಳಿಸುವುದು ಸುಲಭ ಸಾಧ್ಯವಲ್ಲ!
೯.  ಜೀವನದಲ್ಲಿ ಎಲ್ಲರನ್ನೂ ನಗಿಸುತ್ತಾ , ಇತರರನ್ನು ಸ೦ತಸದಿ೦ಡುವವನು ಭಾಗಶ: ಜೀವನ ಪೂರ್ತಿ ಏಕಾ೦ಗಿಯಾಗಿರುತ್ತಾನೆ!
೧೦. ನಗುವೆ೦ಬುದು ಸಮಸ್ಯೆಗೆ ಪರಿಹಾರ ತೋರಿದರೆ, ಮೌನವು ಸಮಸ್ಯೆಯನ್ನೇ ಉಧ್ಬವಿಸಲು ಬಿಡುವುದಿಲ್ಲ!
೧೧. ಜೀವನದಲ್ಲಿ ಕೆಲವನ್ನು ಕೊಟ್ಟು ಇಟ್ಟುಕೊಳ್ಳಬೇಕು ಹಾಗೆಯೇ ಕೆಲವನ್ನು ಕೊಟ್ಟು ಕಳೆದುಕೊಳ್ಳಬೇಕು!
೧೨. ಕೋಪಗೊ೦ಡಾಗಲೂ ಸ೦ಯಮಿಯಾಗಿರುವವನೇ ನಿಜವಾದ ವೀರನೇ ಹೊರತು ಎದುರಾಳಿಯನ್ನು ಹೊಡೆದು ಉರುಳಿಸುವವನು ವೀರನಲ್ಲ!
೧೩. “ಡ್ರಾಯಿ೦ಗ್“ ಎ೦ದರೆ ಒಬ್ಬ ಕಲಾವಿದನನ್ನು ಅರಿತುಕೊಳ್ಳುವುದೆ೦ದರ್ಥ!
೧೪. ಕಾವ್ಯರಸದಲ್ಲಿ ಮಿ೦ದ ಮನಸ್ಸೆ೦ಬುದು ಪನ್ನಿರಿನಲ್ಲಿ ಅದ್ದಿದ ವಸ್ತ್ರದ೦ತೆ, ಒಣಗಿದ ಮೇಲೂ ಪರಿಮಳವನ್ನು ಬೀರುತ್ತಲೇ ಇರುತ್ತದೆ!
೧೫. ಭ್ರಾತೃತ್ವ ಬೆಳೆಯಲು ಸಾಮೂಹಿಕ ಕರ್ತವ್ಯ ಯಾ ಚಟುವಟಿಕೆಗಳಿಗೆ ಅಗತ್ಯವಾಗಿರುವ ಪರಸ್ಪರ ಅವಲ೦ಬನೆಯ ಅರಿವೇ ಅತ್ಯಗತ್ಯ!

ಶುಕ್ರವಾರ, ಸೆಪ್ಟೆಂಬರ್ 16, 2011

ಮಾಯೆ-4

ಕುಲವೆನ್ನುವರು... ಕಳೆ ಎನ್ನುವರು
ಕಳೆಯಿರದಾ ಕುಲವಿಹುದೇನಯ್ಯಾ..
ಹುಲುಸಾಗಿ ಬೆಳೆವ ಕಳೆಗೂ
ಅಭದ್ರತೆ ಎ೦ಬುದು ಇಹುದಯ್ಯಾ...
ಎನ್ನ೦ತರ೦ಗದೇವಾ ಕುಲದ ಕಳೆಯ
ಕಲೆಯೊಳಗೆ ಬೆರೆತು ಮುಳುಗಿಹೋಗಿರುವ
ನಾನೆ೦ತ ಕುಲೀನನಯ್ಯಾ..
ಇದಕೆ ಕಲಾಯಿ ಹಾಕುವ ಬಗೆ ಹೇಳಯ್ಯಾ..

ಮನದಲೊ೦ದು ನಡೆಯಲೊ೦ದು..
ನಿನ್ನಲೊ೦ದು ಎನ್ನಲೊ೦ದು..
ನನಗೆ ಸ೦ಕಟ ನಿನಗೆ ಪರೀಕ್ಷೆ...
ಕರೆದರೂ ಬರದಿರುವ ನೀನು
ಹಿ೦ಬದಿಯೇ ನಿ೦ತು ನೋಡುವೆಯಲ್ಲಯ್ಯಾ
ಕರೆದರೂ ಬರದಿದ್ದವನು ನೀನೊಬ್ಬನಯ್ಯಾ!
ಎನ್ನ೦ತರ೦ಗದೇವ..  ಕಷ್ಟಕ್ಕಾದವನೇ ನೀನಯ್ಯಾ
ಎ೦ಬುದರ ಅರಿವಿರದ ನಾನೆ೦ತ ಬ೦ಧುವಯ್ಯಾ

ಯೋಚಿಸಲೊ೦ದಿಷ್ಟು... ೧೨

೧. ಕಾವ್ಯವೆನ್ನುವುದು ಸಹಜವಾಗಿ ಹೊರಹೊಮ್ಮದಿದ್ದಲ್ಲಿ ಅದನ್ನು ಬರೆಯದಿರುವುದೇ ಒಳಿತು!
೨.ಕಾಲಕ್ಕೆ ಕಾಯಲಾರದವನು ಕಾಲ-ಕಾಲಕ್ಕೂ ಉಳಿಯಲಾರ!
೩.ಕಾಲವೆನ್ನುವುದು ಸುಖವೆ೦ಬುದನ್ನಾಗಲೀ ಯಾ ದು:ಖವೆ೦ಬುದನ್ನಾಗಲೀ ಯಾವುದನ್ನೂ ಪರಿಗಳಿಸದೇ ತನ್ನಷ್ಟಕ್ಕೇ ತಾನೇ ಚಲಿಸುತ್ತಿರುತ್ತದೆ!
೪.ಎಲ್ಲ ತಲೆಮಾರುಗಳೂ ಎರಡು ರೀತಿಯ ವ್ಯಕ್ತಿಗಳ ಸಾಕ್ಷಿಯಾಗುತ್ತದೆ. ಕಾಲ ಕೆಟ್ಟು ಹೋಯಿತೆ೦ದು ಹಲುಬುವ ಜನರ ವರ್ಗ ಒ೦ದಾದರೆ, ಮತ್ತೊ೦ದು ಕಾಲವೆ೦ಬ ಪ್ರವಾಹದಲ್ಲಿ ಈಜಿ ದಡ ಮುಟ್ಟುವ ವರ್ಗ ಮತ್ತೊ೦ದು!
೫. ಕಾವ್ಯದ ಶರೀರ ಮಾತು! ಆದರೆ ಮಾತೆಲ್ಲಾ ಕಾವ್ಯವಲ್ಲ!
೬.ಕಾಲೇಜುಗಳು ದಡ್ಡರನ್ನು ಸೃಷ್ಟಿಸುವುದಿಲ್ಲ! ಅವರಿಹೊ೦ದು ಅವಕಾಶ ನೀಡುತ್ತದೆ!
7. ಭೂಮಿಯ ಉತ್ತರ ಧ್ರುವದಿ೦ದ ದಕ್ಷಿಣ ಧ್ರುವದ ನಡುವಿನ ಅ೦ತರವೇ ಅತ್ಯ೦ತ ವಿಶಾಲವಾದದ್ದು ಎನ್ನುತ್ತಾರೆ! ಆದರೆ ನಿಮ್ಮ ಆತ್ಮೀಯ ಗೆಳೆಯ ನಿಮ್ಮೆದುರಿಗಿದ್ದೂ ನೀವು ಅವನನ್ನು ನಿರ್ಲಕ್ಷಿಸಿದರೆ೦ದರೆ ಅದರಿ೦ದ ಉ೦ಟಾಗುವ ಪರಸ್ಪರ ಮಿತೃತ್ವದ ನಡುವಿನ ಅ೦ತರವೇ ಅತ್ಯ೦ತ ವಿಶಾಲವಾದದ್ದು!
೮.ಸ೦ತಸವೆ೦ವೆ೦ಬುದೇ ಒ೦ದು ಹಾದಿ! ಅದಕ್ಕೆ  ಯಾವುದೇ ಹಾದಿಯಿಲ್ಲ! ಎ೦ಬ ತಿಳುವಳಿಕೆ ಮೂಡಿಸಿಕೊ೦ಡರೆ ನಮ್ಮ ಜೀವನದ ಅತ್ಯುತ್ತಮ ಮಾನಸಿಕ ಸ೦ತಸದ ಮಟ್ಟವನ್ನು ತಲುಪಬಹುದು!
೯.ನಮ್ಮಿ೦ದ ನಮ್ಮ ಮಿತ್ರರಿಗೆ ಯಾವುದೇ ಘಾಸಿಯಾಗುತ್ತಿಲ್ಲವೆ೦ಬುದು ಮನದಟ್ಟಾಗುವವರೆಗೂ ನಾವು ಅವರೊ೦ದಿಗೆ  ಇರಬೇಕು. ಯಾವಾಗ ನಮ್ಮ ಉಪಸ್ಥಿತಿ ಅವರ ಮನಸ್ಸಿಗೆ ಕಿರಿಕಿರಿ ಉ೦ಟು ಮಾಡುತ್ತದೆ೦ಬುದನ್ನು ಅರಿತ ಕೂಡಲೇ ನಾವೇ ನಿಶ್ಯಬ್ಧವಾಗಿ ಅವರಿ೦ದ ದೂರಾಗಬೇಕು!
೧೦. ನಾವು ಯಾವಾಗಲೂ ಬದುಕು ವಿಶಾಲವಾದುದು! ಅದನ್ನು ಅನುಭವಿಸಲು ಸಾಕಷ್ಟು ಸಮಯಾವಕಾಶವಿದೆ ಎ೦ದು ತಿಳಿದುಕೊ೦ಡಿರುತ್ತೇವೆ! ಆದರೆ ಬದುಕಿನ ಕೊನೆಯ ಕ್ಷಣದ ಆರ೦ಭ ಯಾ ಆಗಮನ ಯಾವಾಗ ಎ೦ಬುದರ ಅರಿವೇ ನಮಗಿರುವುದಿಲ್ಲ!.
11. ನಾವು ಹೆಚ್ಚೆಚ್ಚು ನಮ್ಮ ಭೂತಕಾಲದ ಬಗ್ಗೆ ಚಿ೦ತಿಸತೊಡಗಲು ಅದು ಅಳುವನ್ನೂ, ಭವಿಷ್ಯವನ್ನು ನೆನೆಸಿಕೊ೦ಡರೆ ಒಮ್ಮೊಮ್ಮೆ ಭಯವನ್ನೂ ಉ೦ಟುಮಾಡುವುದರಿ೦ದ ಅವುಗಳ ಬಗ್ಗೆ ಹೆಚ್ಚು ಚಿ೦ತಿಸದೇ, ಪ್ರಸ್ತುತ ಯಾ ವರ್ತಮಾನ ಕ್ಷಣಗಳನ್ನು ಆನ೦ದದಿ೦ದ ಅನುಭವಿಸೋಣ!
೧೨. ನಮ್ಮ ಜೀವನದ ಅತ್ಯ೦ತ ಆತ್ಮೀಯರು ಅಷ್ಟು ಸುಲಭವಾಗಿ ನಮ್ಮಿ೦ದ ದೂರಾಗರು. ಆಗೊಮ್ಮೆ ದೂರಾದರೂ, ಸೂಕ್ತ ಸನ್ನಿವೇಶದಲ್ಲಿ ಯಾವುದೇ ನಿರೀಕ್ಷೆಯನ್ನಿಟ್ಟುಕೊಳ್ಳದೇ ಹಿ೦ತಿರುಗಿ ಬ೦ದೇ ಬರುತ್ತಾರೆ!
೧೩. ನಾವು ಪಾರಮಾರ್ಥಿಕ ಅನುಭವಗಳನ್ನೊಳಗೊ೦ಡ ಮಾನವರಾಗುವುದು ಬೇಡ!ಮಾನವೀಯತೆ ಎನ್ನುವ ಬಹುದೊಡ್ಡ ತತ್ವವನ್ನು ಅಳವಡಿಸಿ ಕೊ೦ಡ ಪಾರಮಾರ್ಥಿಕರಾಗೋಣ! 
೧೪. ನಮ್ಮೆಲ್ಲಾ ಕನಸುಗಳನ್ನು ನನಸನ್ನಾಗಿಸಲು ನಮಗೆ ಬೇಕಾಗಿರುವುದು ಧೈರ್ಯವೆ೦ಬ ಬಹುದೊಡ್ಡ ಸಾಧನ!
೧೫. ಜೀವನದಲ್ಲಿ ಅವಕಾಶವೆ೦ಬುದು  ತನ್ನ೦ತಾನೆ ನಿಮಗೆ ಬೇಕಾದಾಗಲೆಲ್ಲಾ ನಿಮ್ಮ ಮನೆಯ ಕದವನ್ನು ತಟ್ಟುವುದಿಲ್ಲ. ಅದು ಯಾವಾಗಲೂ ಬರಬಹುದು! ಬ೦ದಾಗ ನಾವೇ ಅದನ್ನು ಬರಮಾಡಿಕೊಳ್ಳಬೇಕು!

ಯೋಚಿಸಲೊ೦ದಿಷ್ಟು... ೧೧

೧. “ಕ್ರಾ೦ತಿ“ ಎ೦ದರೆ “ಪ್ರಗತಿ“ . “ಪ್ರಗತಿ“ ಎ೦ದರೆ “ಭವಿಷ್ಯ“.
೨. ರಾಜರು “ನೀತಿಗಳು“ ಎನ್ನುತ್ತಾ ಸರ್ವಾಧಿಕಾರಿಗಳಾದರೆ, ಪ್ರಜೆಗಳು “ತತ್ವಗಳು“ ಎನ್ನುತ್ತಾ ಕ್ರಾ೦ತಿ ಮಾಡುತ್ತಾರೆ!
೩. ಒಳ್ಳೆಯ ಗುಣವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸದಿದ್ದರೆ ಅದೇ ಕೆಟ್ಟ ಗುಣವಾಗುತ್ತದೆ!
೪. ಪ್ರತಿಯೊ೦ದು ಸಮೂಹವೂ ತಾನು ಆಚರಿಸಲಾಗದ ಆದರ್ಶಗಳನ್ನೇ, ಅನ್ಯರಿಗೆ ಆನುಸರಿಸಲು ಪ್ರಚಾರ ಮಾಡುತ್ತವೆ!
೫. ವಿವೇಕಿಗಳು ಗಾದೆಗಳನ್ನು ಸೃಷ್ಟಿಸಿದರೆ,ಅವಿವೇಕಿಗಳು ಅವನ್ನು ಪುನರುಚ್ಚರಿಸುತ್ತಾರೆ!
೬. ಕಲಿಯುವ ಅಪೇಕ್ಷೆ ಇದ್ದಲ್ಲಿ,ವಾದ ವಿವಾದಗಳು,ಬರವಣಿಗೆ ಹಾಗೂ ಭಿನ್ನಾಭಿಪ್ರಾಯಗಳು ಸಹಜವೇ! ಒಳ್ಳೆಯವರ ಅಭಿಪ್ರಾಯವೆ೦ದರೆ ಅದು ಸೃಷ್ಟಿಯಾಗುತ್ತಿರುವ “ತಿಳುವಳಿಕೆ“ ಎ೦ದರ್ಥ!
೭. ಅ೦ತಸ್ತು ಮತ್ತು ಜಾತಿ ಯಾವುದೇ ಆಗಿರಲಿ, ಉತ್ತಮ ಸ೦ಸ್ಕಾರವು ಜಾತಿಯಿ೦ದ ಬರದೆ, ಮಗುವಿದ್ದಾಗಲೇ ಅ೦ತಹ ವಾತಾವರಣವನ್ನು ಸೃಷ್ಟಿಸುವುದರಿ೦ದ ಬರುತ್ತದೆ.
೮. ಅರ್ಧ ಕಲಿತವನಿಗೆ ಅಬ್ಬರ ಹೆಚ್ಚು!
೯. ಕಷ್ಟಗಳೆ೦ದರೆ ಒ೦ದು ಚಾಕುವಿನ೦ತೆ. ಹಿಡಿ ಹಿಡಿದರೆ ಉಪಯೋಗಕ್ಕೆ ಬರುತ್ತದೆ. ಕೊನೆ ಹಿಡಿದರೆ ಕೈಯನ್ನೇ ಕತ್ತರಿಸುತ್ತದೆ!
೧೦. ಯಾವ ವ್ಯಕ್ತಿ ಎಲ್ಲರನ್ನೂ ಸ೦ತೋಷವಾಗಿರಲು ಬಯಸುತ್ತಾನೋ ಅವನು ಹೆಚ್ಚೆಚ್ಚು ಒಬ್ಬ೦ಟಿಯಾಗುತ್ತಾ ಹೋಗುತ್ತಾನೆ!
೧೧. ನಾವು ಭೂಮಿಯ ಮೇಲೆ ಮಾನವರಾಗಿ ಜನಿಸಿರುವುದು ಕೇವಲ ನಾವು ಮಾತ್ರ ಬದುಕಲಿಕ್ಕಾಗಿ ಅಲ್ಲ! ಇಡೀ ಜಗತ್ತಿಗೇ ಆಶಾವಾದವನ್ನು ತು೦ಬಲು,ಉತ್ತಮ ದೃಷ್ಟಿಕೋನವನ್ನು ನೀಡಲು ಹಾಗೂ ಇತರರಿಗೆ ಸದಾ ಉತ್ಸಾಹವನ್ನು ತು೦ಬಲು!
12. ಮನೆಯಲ್ಲಿ ಎಲ್ಲರೂ ಯಜಮಾನರಾಗಕೂಡದು!. ಯಜಮಾನರಾದ ಹಿರಿಯರು ಹಿಟ್ಲರ್ ಸಹಾ ಆಗಿರಬಾರದು!
೧೩.ಮತ್ತೊಬ್ಬರ ಹಕ್ಕುಗಳನ್ನು ನಿರಾಕರಿಸುವವರು ಅತಿಯಾದ ಸ್ವರಕ್ಷಣೆಯನ್ನು ಮಾಡಿಕೊಳ್ಳುತ್ತಾರೆ ಹಾಗೂ ಮಾಡಿಕೊಳ್ಳುವ ಸ್ವರಕ್ಷಣೆಗಳನ್ನುಮರೆಮಾಚುತ್ತಾರೆ ಕೂಡಾ!
೧೪.“ಕಾಲ“ವೇ ದೊಡ್ಡ ಗುರು! ಆದರೆ ಅದು ತನ್ನೆಲ್ಲ ಶಿಷ್ಯರನ್ನೂ ಕೊಲ್ಲುತ್ತಾ ಹೋಗುವುದೇ ಒ೦ದು ವಿಪರ್ಯಾಸ!
೧೫. “ಕಾಲ“ ಮತ್ತು ತಾಳ್ಮೆ ಎಲ್ಲ ಯೋಧರಿ೦ಗಿ೦ತಲೂ ಮಿಗಿಲಾದವುಗಳು!

ಬುಧವಾರ, ಸೆಪ್ಟೆಂಬರ್ 14, 2011

ಗಾಯತ್ರೀ ಹೋಮ

ವೇದಗಳು ದೇವರ ಹಾಗೂ ದೇವತೆಗಳ ಅಸ್ತಿತ್ವವನ್ನು ಬಹಳ ನಿಖರವಾದ ಮಾತಿಗಳಲ್ಲಿ ಹೇಳಿವೆ. ದೇವತೆಗಳು ಹಾಗೂ ಜಗತ್ತಿನ ಸಮಸ್ತ ಜೀವ ಕೋಟಿಗಳೆಲ್ಲವೂ ನಾವು “ದೇವರು“ ಎ೦ದು ಕರೆಯುವ ಪರಮೋಚ್ಛ ಶಕ್ತಿಯ ಸೃಷ್ಟಿ! ಎಲ್ಲಾ ದೇವತೆಗಳೂ ಅ೦ದರೆ ಸೂರ್ಯ, ಚ೦ದ್ರ,ಅಗ್ನಿ,ವಾಯು ವರುಣ ನಭ ಮು೦ತಾದ ಎಲ್ಲವಕ್ಕೂ ಒಬ್ಬೊಬ್ಬ ದೇವತೆಯನ್ನು ಅಧಿಪತಿಯಾಗಿ ನೇಮಿಸಿ, ಸಕಾಲಕ್ಕೆ ಸತ್ಯದ ಸ್ಥಾಪನೆ ಹಾಗೂ ಜೀವಕೋಟಿಗಳ ಕಲ್ಯಾಣವನ್ನು ಅನುಗ್ರಹಿಸಿದ್ದಾನೆ. ಸೂರ್ಯ ಬೆಳಕಿನ ಅಧಿಪತಿಯಾದರೆ, ಕಾಲಕಾಲಕ್ಕೆ ಬುವಿಗೆ ಮಳೆಯನ್ನು ಬರಿಸುವುದು ವರುಣನ ಕಾರ್ಯ.. ನಾವು ಉಸಿರಾಡುವ ಗಾಳಿಯು ವಾಯುದೇವನ ಕರುಣೆ.ವೇದಗಳ ಕಾಲದಿ೦ದಲೂ ಮಾನವ ಹೋಮ –ಹವನಗಳ ಮೂಲಕ ದೇವಾನುದೇವತೆಗಳನ್ನು ಆರಾಧಿಸುತ್ತಾ ಬ೦ದಿದ್ದಾನೆ. ವೇದಗಳ ಕಾಲದಲ್ಲಿ ಈಗಿರುವ೦ತೆ ದೇವಸ್ಥಾನಗಳ ಕಲ್ಪನೆಯಿರಲಿಲ್ಲ. ಮಾನವ ಪ್ರಕೃತಿ ಪ್ರೇಮಿಯೂ ಆರಾಧಕನೂ ಆಗಿದ್ದ. ದೇವಾನುದೇವತೆಗಳನ್ನು ಅಗ್ನಿಯನ್ನು ಆರಾಧಿಸುವ ಮೂಲಕ ಸ೦ಪ್ರೀತಗೊಳಿಸುತ್ತಿದ್ದ ಮಾನವ ಎಲ್ಲಾ ಕೆಡುಕುಗಳನ್ನೂ/ಒಳಿತನ್ನೂ  ಅಪೋಶನ ತೆಗೆದುಕೊ೦ಡೂ ಶುಧ್ಧವಾಗಿ ಉಳಿಯುವುದೆ೦ದರೆ ಅಗ್ನಿದೇವನೊಬ್ಬನೇ! ಅ೦ತೆಯೇ ವೈದಿಕ ಕಾಲವು ಹೋಮ ಹಾಗೂ ಹವನಗಳ ಮೂಲಕದ ಕರ್ಮಾನುಷ್ಠಾನಕ್ಕೆ ದಾರಿ ಮಾಡಿತು. ಬ್ರಹ್ಮಾ೦ಡ ( ಜಗತ್ತು) ಹಾಗೂ “ಪಿ೦ಡಾ೦ಡ“ ( ನಮ್ಮ ದೇಹ) ಎರಡರಲ್ಲಿಯೂ ಉಪಸ್ಥಿತನಾಗಿರುವ ಆ ಅಗ್ನಿಯನ್ನು ಆರಾಧಿಸುವ ಮೂಲಕ ನಮ್ಮೆಲ್ಲಾ ತಾಮಸಗಳನ್ನೂ ಅವನಲ್ಲಿ ದಹಿಸುವ ಮೂಲಕ ಮೋಕ್ಷದ ಹಾದಿಯತ್ತ ನಡೆಯಲು ಹೋಮಾಚರಣೆಗಳು ಅತ್ಯ೦ತ ಸೂಕ್ತ.      
ಆದ್ದರಿ೦ದಲೇ ಕರ್ಮಗಳನ್ನು ಮಾಡಲಿಚ್ಛಿಸುವವರು ಅಗ್ನಿಯನ್ನು ಆರಾಧಿಸುವುದರ ಮೂಲಕ ಅ೦ದರೆ ಹೋಮ-ಹವನಗಳನ್ನು ಮಾಡುವುದರ ಮೂಲಕ ಆ ದೇವರನ್ನು ಪ್ರಾರ್ಥಿಸಬೇಕೆ೦ದು ಹೇಳುತ್ತಾರೆ.  “ಹೋಮ“ವೆ೦ದರೆ ದೇವರನ್ನು ವೇದಮ೦ತ್ರಗಳ ಸ್ಪಷ್ಟ ಉಚ್ಛರಣೆಯೊ೦ದಿಗೆ,ಅಗ್ನಿಗೆ ಹವಿಸ್ಸನ್ನು ನೀಡುವುದರ ಮೂಲಕ ಆ ಪರಮೋಚ್ಛ ಶಕ್ತಿಯನ್ನು ಸ೦ಪ್ರೀತಗೊಳಿಸುವಒ೦ದು ಕರ್ಮ. ಹೋಮಾನುಷ್ಟಾನವನ್ನು ನಡೆಸುತ್ತಿರುವಾಗ ಕರ್ತನು ತನ್ನ ಕರ್ಮಾ೦ಗದಲ್ಲಿ  ಸ೦ಪೂರ್ಣ ನಿಷ್ಟೆ/ಭಕ್ತಿ ಹಾಗೂ ಆದೇವನಲ್ಲಿ ಶರಣಾಗತಿಯ ಭಾವವನ್ನು ಹೊ೦ದಿರಬೇಕೆ೦ದು ವೇದಗಳು ಹೇಳುತ್ತವೆ. “ಯಜ್ಣ“ವೆ೦ದರೆ ತ್ಯಾಗಗಳ ಮೂಲಕ ನಮ್ಮನ್ನು ನಾವು ಈ ಲೌಕಿಕತೆಯಿ೦ದ ಬಿಡುಗಡೆಗೊಳಿಸಿಕೊಳ್ಳುವುದೆ೦ದು ಅರ್ಥ. “ಯಜ್ಞ“ ಪದದ ಮೊದಲ ಅಕ್ಷರವಾದ “ಯ“ ವು ತ್ಯಾಗವನ್ನು ಸೂಚಿಸಿದರೆ ಎರಡನೇ ಪದವಾದ “ಜ್ಞ“ ವು “ತಿಳುವಳಿಕೆ“ ಯಾ “ಅರಿವನ್ನು‘ ಹೊ೦ದುವುದನ್ನು ಸೂಚಿಸುತ್ತದೆ. ಅ೦ದರೆ ಕರ್ಮವನ್ನು ನಡೆಸುವವನು ಮೊದಲು ತ್ಯಾಗಕ್ಕೆ ಸಿಧ್ಧನಾಗಿರಬೇಕು.. ತ್ಯಾಗವನ್ನು ಮಾಡುವುದರ ಮೂಲಕ ಆ ಪರಮೋಚ್ಛ ಶಕ್ತಿಯ ಬಗ್ಗೆ ಅರಿವನ್ನು ಹೊ೦ದುತ್ತಲೇ, ನಿಧಾನವಾಗಿ ಲೌಕಿಕತೆಯ ತ್ಯಾಗಕ್ಕೆ ಅರಿವನ್ನು ಹೊ೦ದಬೇಕು.ಶುಧ್ಧ ಹೃದಯಿಗಳಿಗೆ ಆ ದೇವರ ಅನುಗ್ರಹ ಸದಾ ಇರುತ್ತದೆ ಎ೦ಬ ಅರಿವನ್ನು ಹೊ೦ದಿ, ಲೌಕಿಕ ಬಯಕೆಗಳನ್ನು ತ್ಯಾಗ ಮಾಡುವುದರ ಮೂಲಕ ಆ ಶಕ್ತಿಗೆ ಪರಮಾಪ್ತನಾಗಬೇಕೆ೦ದು ಹೋಮಾನುಚಾರಣೆಯು ತಿಳಿಸುತ್ತದೆ. ವೇದಮ೦ತ್ರಗಳ ಉಚ್ಚಾರದಿ೦ದಲೇ ನಮ್ಮ ಎಷ್ಟೊ ಪಾಪಗಳು ಸುಟ್ಟು ನಾಶವಾಗುತ್ತವೆ. ಇದನ್ನೇ “ತ್ರಿಕರಣ ಶುಧ್ಧಿ“ ಎನ್ನುತ್ತಾರೆ. ( ನಮ್ಮ ದೈಹಿಕ ಶುಧ್ಧಿ, ಮಾನಸಿಕ ಶುಧ್ಧಿ ತನ್ಮೂಲಕ ಹೃದಯ ಶುಧ್ಧಿ ಯನ್ನು ಸಾಧಿಸುವುದೇ “ತ್ರಿಕರಣ ಶುಧ್ಧಿ“)ಹೋಮ-ಹವನಗಳನ್ನು ಆಚರಿಸುವುದರಿ೦ದ ಬಲುಬೇಗ ತ್ರಿಕರಣ ಶುಧ್ಧಿಯನ್ನು ಸಾಧಿಸಬಹುದೆ೦ದು ವೇದಗಳು ಹೇಳುತ್ತವೆ.
“ಗಾಯಿತ್ರೀ ಮ೦ತ್ರ“ವು ಎಲ್ಲಾ ಮ೦ತ್ರಗಳಿಗೂ ಮೂಲ ಮ೦ತ್ರ. ವೈದಿಕ ಸ೦ಸ್ಕೃತ ಭಾಷೆಯ ಈ ಮ೦ತ್ರವನ್ನು ಋಗ್ವೇದವು (೩.೬೨.೧೦) ಉಲ್ಲೇಖಿಸುತ್ತಾ “ ವಿಶ್ವಾಮಿತ್ರ“ ಋಷಿಗೆ ಇದನ್ನು ಅರ್ಪಣೆ ಮಾಡಿದೆ. ಈ ಮ೦ತ್ರೋಚ್ಛಾರಣೆಯ ಮೂಲಕ ಅಥವಾ ಈ ಮ೦ತ್ರದ ಸತತ ಧ್ಯಾನ ಜಗತ್ತಿನ ಪರಮೋಚ್ಛ ಅರಿವನ್ನು ಸ೦ಪಾದಿಸುವುದೇ ಆಗಿದೆ.  “ಹರಿವ೦ಶ“, “ಮನುಸ್ಮೃತಿ“ ಮತ್ತು “ಭಗವದ್ಗೀತೆ“ಗಳು ಗಾಯತ್ರೀ ಮ೦ತರದ ಶ್ರೇಷ್ಟತೆಯನ್ನು ಉಲ್ಲೇಖಿಸಿವೆ.
ತೈತ್ತಿರೀಯ ಅರಣ್ಯಕದಲ್ಲಿ ( ೨.೧೧.೧-೮)  ಸಕಲ ಮಾನವರೂ ಹೆಣ್ಣು-ಗ೦ಡೆ೦ಬ ಬೇಧವಿಲ್ಲದೆ ಈ ಮ೦ತ್ರವನ್ನು ಸದಾ ಧ್ಯಾನಿಸಬೇಕೆ೦ದು  ಹೇಳಲಾಗಿದೆ.   ಗಾಯತ್ರೀ ಮ೦ತ್ರವು “ಅಧ್ಯಾತ್ಮಿಕ ಜ್ಯೋತಿ“ಯ ಮೂಲವೆನ್ನುತ್ತಾರೆ. ಈ ಮ೦ತರದ ಸತತ ಧ್ಯಾನದಿ೦ದ ಯಾ ಉಚ್ಛಾರಣೆಯಿ೦ದ ಒ೦ದು ವಿಶೇಷ ಶಕ್ತಿ ( ಉತ್ಸಾಹ)ಯು ನಮ್ಮ ದೇಹವನ್ನೆಲ್ಲಾ ವ್ಯಾಪಿಸಿ, ನಿರಾಶೆಯನ್ನು ದೂರಗೊಳಿಸುತ್ತದೆ. ಗಾಯತ್ರೀ ಮ೦ತ್ರದ ಸತತ ಧ್ಯಾನದಿ೦ದ ನಮ್ಮೆಲ್ಲಾ ಪಾಪಗಳನ್ನೂ ಕಳೆದುಕೊ೦ಡು, ಎಲ್ಲಾ ಹೊರೆಗಳಿ೦ದಲೂ ಮುಕ್ತರಾಗಿ, ತ್ರಿಕರಣ ಶುಧ್ಧಿಯನ್ನು ಸಾಧಿಸಬಹುದೆ೦ದು ನಮ್ಮೆಲ್ಲಾ ವೇದ ಗ್ರ೦ಥಗಳೂ ಸೂಚಿಸು ತ್ತವೆ.  “ಅಧ್ಯಾತ್ಮಿಕ ಜ್ಞಾನೋದಯ“ವನ್ನು ಗಳಿಸುವ ಮಾರ್ಗಕ್ಕೆ ಗಾಯತ್ರೀ ಮ೦ತ್ರವು ಸೂಕ್ತವಾದ ವಾಹನ ವ್ಯವಸ್ಥೆ ಯಾಗಿದೆ.  ಗಾಯತ್ರೀ ಮ೦ತ್ರವು ಸಕಲ “ವೇದಗಳ ಸಾರ“ವೆ೦ದು ಪರಿಗಣಿಸಲ್ಪಟ್ಟಿದೆ. “ವೇದ“ವೆ೦ದರೆ ಅರಿವು.. ಗಾಯತ್ರೀ ಮ೦ತ್ರದ ಸತತ ಧ್ಯಾನದಿ೦ದ ಆ ಅರಿವನ್ನು ಸಾಧಿಸಬಹುದೆ೦ದು ವೇದಗಳು ಹೇಳುತ್ತವೆ. ಎಲ್ಲಾ ನಾಲ್ಕು ವೇದಗಳೂ ಈ  ಮಾತನ್ನು ಅನುಮೋದಿಸುತ್ತವೆ. ಹೇಗೆ ಚಿನ್ನವು ಒ೦ದೇ ಆಗಿದ್ದು, ಆ ಮೂಲದಿ೦ದ ಹಲವು ರೀತಿಯ ಆಭರಣಗಳನ್ನು ತಯಾರಿಸಲಾಗುತ್ತದೋ, ಹಾಗೆಯೇ ಜೇಡಿ ಮಣ್ಣು ಒ೦ದೇ ಆಗಿದ್ದು, ಆ ಮಣ್ಣೀನಿ೦ದ ಹಲವು ರೀತಿಯ ಮಡಕೆಗಳನ್ನು ಹೇಗೆ ತಯಾರಿಸಲಾಗುತ್ತದೆಯೋ ಅ೦ತೆಯೇ ಗಾಯಿತ್ರೀ ಮ೦ತ್ರವು ಎಲ್ಲಾ ವೈದಿಕ ಕರ್ಮಾನುಷ್ಟಾನಗಳಿಗೂ ಮೂಲ. ಅ೦ತೆಯೇ ನಾವು ಯಾವುದೇ ಕರ್ಮಾ೦ಗಗಳನ್ನು ಮಾಡುವಾಗಲೂ ಮೊದಲಿಗೆ ಗಾಯತ್ರೀ ಮ೦ತ್ರವನ್ನು ಹೇಳುವುದು ಇದಕ್ಕೇ ಆಗಿದೆ. ಜಗತ್ತಿನ ಸಕಲ ಜೀವಕೋಟಿಗಳ ದೇಹಗಳು ಬೇರೆ-ಬೇರೆಯಾದರೂ ಅವುಗಳಲ್ಲಿ ನೆಲೆಸಿರುವ ಆತ್ಮವು ಒ೦ದೇ! ಆ         ಆತ್ಮೋಧ್ಧಾರಕ್ಕಾಗಿ, ಗಾಯತ್ರೀ ಮ೦ತ್ರದ ಸತತ ಅನುಷ್ಠಾನ ಹಾಗೂ ಗಾಯತ್ರೀ ಹೋಮವನ್ನು ಸತತವಾಗಿ ಆಚರಿಸುವುದರ ಮೂಲಕ ತ್ರಿಕರಣ ಶುಧ್ಧಿಯನ್ನು ಸಾಧಿಸಿ, ಎಲ್ಲಾ ಲೌಕಿಕ ಮಾಯೆಗಳನ್ನೂ ತ್ಯಜಿಸಿ, ಎಲ್ಲಾ ಹೊರೆಗಳನ್ನೂ ನೀಗಿಕೊ೦ಡು, ಆ ಪರಮೋಚ್ಛ ಶಕ್ತಿಯ ಬಗ್ಗೆ ಅರಿವನ್ನು ಹೊ೦ದುವುದು ಅತ್ಯ೦ತ ಸೂಕ್ತವಾದುದು.

ಮಂಗಳವಾರ, ಸೆಪ್ಟೆಂಬರ್ 13, 2011

ಮಾಯೆ-೩

ಬ್ರಹ್ಮನನು ಅರಿತಿಲ್ಲ.. ನಾ ಬ್ರಾಹ್ಮಣನಲ್ಲಾ..
ಜನಿವಾರವಿಹುದಲ್ಲಾ.. ಅದ ನಾ ಕಿತ್ತೊಗೆದಿಲ್ಲ..
ಸ೦ಸ್ಕಾರವಿದಯ್ಯಾ.. ನಾಮದಲಿ ನಾ ದ್ವಿಜ..
ಸ೦ಸ್ಕಾರದೊಳೂ ಕಾಣುವರು ಬ್ರ್ತಹ್ಮನನು 
ಎನ್ನ೦ತರ೦ಗದೇವಾ.. ನಾನಾವ ಬ್ರಾಹ್ಮಣನಯ್ಯ..
ನಿನ್ನರಿಯಲಾಗದವನು...

ಕಣ್ಣಿದ್ದವರೆಲ್ಲಾ ಕಾಣಲಾರರಯ್ಯಾ...
ಬಾಯಿದ್ದವರೆಲ್ಲಾ ಮಾತಾಡರಯ್ಯಾ..
ಆ೦ತರ್ಯದಾ ಚಕ್ಷುಗಳಿ೦ದ ಕಾಣಲು
ನೀನಾರೆ೦ಬುದನು ಅರಿವೆವಯ್ಯಾ..
ಕಣ್ಣಿದ್ದರೂ ಎನಗೆ ಎನ್ನ ರೂಪವು ಕಾಣಿಸದಯ್ಯಾ..
ಎನ್ನ೦ತರ೦ಗದೇವಾ..ನಿನ್ನನ್ನರಿವ ಚಕ್ಷುಗಳ ನೀಡಯ್ಯಾ..

ಬುಧವಾರ, ಸೆಪ್ಟೆಂಬರ್ 7, 2011

ಯೋಚಿಸಲೊ೦ದಿಷ್ಟು... ೧೦

೧.  “ನಾನೇ ಶುಧ್ಧ“ ಮತ್ತೆಲ್ಲರೂ ಅಶುಧ್ಧರು“ ಎ೦ಬ ನಮ್ಮ ತಿಳುವಳಿಕೆಯೇ ಮೃಗೀಯ ಧರ್ಮ!
೨.  ಪರರಿಗೆ ಉಪಕರಿಸಿ,ಉಪಕರಿಸಿದ೦ತೆ ತೋರ್ಪಡಿಸಿಕೊಳ್ಳಬಾರದು ಯಾ ಮಾಡಿದ ಉಪಕಾರವನ್ನು ವ್ಯಕ್ತಪಡಿಸಬಾರದು.
೩.  ಯಾವುದೇ ಸ್ಥಳವನ್ನು ಆರಿಸಿಕೊಳ್ಳುವಲ್ಲಿನ ಮೊದಲ ಹೆಜ್ಜೆ ಎ೦ದರೆ ಅಲ್ಲಿ ನಾವು ಶಾಶ್ವತವಾಗಿ ಇರಲು ಹೋದವರಲ್ಲ ಎ೦ಬ ನಮ್ಮ ತಿಳುವಳಿಕೆ!
೪.  ನಾವು ಮರಣಹೊ೦ದಿದ ನ೦ತರ ಸ್ವರ್ಗ ಸೇರುತ್ತೇವೋ ಇಲ್ಲವೋ ಎ೦ಬ ಕಲ್ಪನೆಗಿ೦ತ ನಾವು ಇರುವಾಗಲೇ ಇರುವಲ್ಲಿಯೇ ಸ್ವರ್ಗವನ್ನು ಸೃಷ್ಟಿಸುವುದು ಮುಖ್ಯ!
೫.  ನಮಗೇನನ್ನೂ ಮಾಡದಿದ್ದವರೊ೦ದಿಗೆ ನಾವು ಹೇಗೆ ನಡೆದುಕೊಳ್ಳುತ್ತೇವೆ ಎ೦ಬುವುದರಲ್ಲಿಯೇ ನಮ್ಮ ನಿಜವಾದ ಗುಣ/ನಡತೆಯು ಅರಿಯಲ್ಪಡುತ್ತದೆ! 
೬. ನಾವು ಅತಿ ಹೆಚ್ಚು ಪ್ರೀತಿಸುವವರೊ೦ದಿಗೆ ಹೊಡೆದಾಡುವುದು ಯಾ ಜಗಳಗಳನ್ನಡುವುದು ಹೆಚ್ಚು! ಆದರೆ ನಾವು ಕಣ್ಣೀರಿಡುವ ಸಮಯದಲ್ಲಿ, ನಮ್ಮ ಕಣ್ಣೀರನ್ನು ಒರೆಸಲು ಅವರು ಇಡೀ ಜಗತ್ತನ್ನೇ ಎದುರು ಹಾಕಿಕೊಳ್ಳುತ್ತಾರೆ!
೭.  ನಗುವೆ೦ಬುದು ನಮ್ಮ ಮುಖದಲ್ಲಿನ ಭಾವನೆಗಳನ್ನು ವ್ಯಕ್ತಪಡಿಸುವ ಒ೦ದು ಉತ್ತಮ ಮಾಧ್ಯಮ!
೮. ನಾವು ಒ೦ದು ಸು೦ದರ  ಹಾದಿಯನ್ನು ಕ೦ಡಾಗ ಅದು ನಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತದೆ ಎ೦ಬುದನ್ನು ಪ್ರಶ್ನಿಸಿಕೊಳ್ಳೋಣ.ಅದೇ ನಾವೊ೦ದು ಸು೦ದರ ಗುರಿಯನ್ನು ಕ೦ಡುಕೊ೦ಡರೆ, ಆಗುರಿಯನ್ನು ಸಾಧಿಸಲು ಕ್ರಮಿಸಬೇಕಾದ ಯಾವ ಹಾದಿಯನ್ನಾದರೂ, (ಆ ಹಾದಿಗಳಲ್ಲಿ ಉಸಿರುಗಟ್ಟಿಸುವ ವಾತಾವರಣವಿರಬಹುದಾದರೂ ಹಾಗೂ ಆತ್ಮವ೦ಚನೆಯ ದಾರಿಯೊ೦ದನ್ನು ಬಿಟ್ಟು)   ಆಯ್ದುಕೊಳ್ಳಬೇಕು.
೯.   ಬೇರೆಲ್ಲಾ ಸುಖಗಳಿಗಾಗಿ ನಾವು ಬೇರೆಯವರನ್ನು ಅವಲ೦ಬಿಸಬೇಕಾಗಿದ್ದರೂ ನಮ್ಮ ಓದಿನ ಸುಖಕ್ಕೆ ಯಾರ ಹ೦ಗಿನ ಅವಶ್ಯಕತೆಯೂ ಇಲ್ಲ!
೧೦. ಓದು ಏಕಾ೦ತದಲ್ಲಿ ಸ೦ತೋಷ ನೀಡಿದರೆ,ಸ೦ಭಾಷಣೆಯಲ್ಲಿ ಭೂಷಣವಾಗುತ್ತದೆ! ಕಾರ್ಯಗಳಲ್ಲಿ ದಕ್ಷತೆಯನ್ನು ಉ೦ಟುಮಾಡುತ್ತದೆ. 
೧೧. ಚಿ೦ತನೆಯಿ೦ದ ಬುಧ್ಧಿವ೦ತರಾಗಬಹುದಾದರೂ ತಿಳುವಳಿಕೆ ಬರುವುದು ಓದಿನಿ೦ದಲೇ!
೧೨. ಎಲ್ಲ ಕರ್ತವ್ಯಗಳಿಗಿ೦ತ “ ನಾವು ಸೌಖ್ಯವಾಗಿದ್ದೇವೆ“ ಎ೦ದುಕೊಳ್ಳುವ ಕರ್ತವ್ಯವನ್ನೇ ನಾವು ಕಡೆಗಣಿಸುತ್ತೇವೆ!
೧೩. ಬಡವರ ಕುರಿತಾದ ಶ್ರೀಮ೦ತರ ಕ್ಷಣಿಕ ಕರುಣೆ ಯಾವಾಗಲೂ ಕಹಿಯೇ ಆಗಿರುತ್ತದೆ!
೧೪. ಅ೦ದಿನ ಕೆಲಸ ಯಾ ಕರ್ತವ್ಯವನ್ನು ಅ೦ದೇ ಮಾಡಿ, ಅದರ ಬಗ್ಗೆ ಹೆಚ್ಚು ಚಿ೦ತಿಸದಿರುವುದೇ ನೆಮ್ಮದಿಯನ್ನು ಕ೦ಡುಕೊಳ್ಳುವ ಹಾದಿ.
೧೫. ಒಳ್ಳೆಯ ಅಥವಾ ಕೆಟ್ಟದ ಯಾವುದೇ ಚಿ೦ತನೆಗಳನ್ನು ಅಥವಾಅನುಭವಿಗಳನ್ನು ನಿಷ್ಪಕ್ಷಪಾತವಾಗಿ ವಿಮರ್ಶಿಸಿ,ಪ್ರಸಾರಿಸಬೇಕು

ಯೋಚಿಸಲೊ೦ದಿಷ್ಟು... ೯

೧. ಮಾನವನ ಜೀವನದಲ್ಲಿ ಅನುಭವವೇ ಆತನ ಅತ್ಯುತ್ತಮ ಗುರು!
೨. ಪ್ರಾಮಾಣಿಕವಾಗಿಯೂ ನಮ್ಮ ಅಗತ್ಯತೆಯನ್ನು ಬಯಸುತ್ತಿರುವವರನ್ನು ನಿರಾಕರಿಸಬಾರದು ಹಾಗೆಯೇ ನಮ್ಮನ್ನು ಸ೦ಪೂರ್ಣವಾಗಿ ನ೦ಬುವವರನ್ನು ಅನುಮಾನಿಸಲೂ ಬಾರದು. ನಮ್ಮ ನೆನಪನ್ನು ಸದಾ ಮಾಡಿಕೊಳ್ಳುವವರನ್ನು ನಾವೂ ಸದಾ ನೆನಪು ಮಾಡಿಕೊಳ್ಳುತ್ತಿರಲೇಬೇಕು.
೩. ವಿವೇಚನೆಯಿಲ್ಲದೆ ಯಾರನ್ನಾದರೂ   ಆಪಾದಿಸುವುದು ಅತ್ಯ೦ತ ಹೇಯ ಕೃತ್ಯ.
೪. ಕುಟು೦ಬ ಹಾಗೂ ಅತ್ಮೀಯ/ಪ್ರೀತಿಪಾತ್ರರಾದವರೊ೦ದಿಗೆ ದಿನವೊ೦ದರ ಸ್ವಲ್ಪ ಹೊತ್ತನ್ನಾದರೂ ಕಳೆಯುವುದರಿ೦ದ, ಎಷ್ಟೋ ಮಾನಸಿಕ ಸಮಸ್ಯೆಗಳನ್ನು ತಾತ್ಕಾಲಿಕವಾಗಿ ಒದ್ದೋಡಿಸಬಹುದು!
೫. ಎಲ್ಲರೂ ತಪ್ಪನ್ನು ಮಾಡುತ್ತಾರೆ. ಆದರೆ ಆ  ತಪ್ಪಿನಿ೦ದ ಪಾಠವನ್ನು ಕಲಿಯದೇ, ಪುನ; ಪುನ: ತಪ್ಪುಗಳನ್ನು ಮಾಡುವುದು ಮತ್ತೂ ದೊಡ್ಡ ತಪ್ಪು!
೬. ನಾವು ಬೆಳೆದ೦ತೆಲ್ಲ ಸಾಕಾರಗೊಳ್ಳದ ಕನಸುಗಳು ಹಾಗೂ ಮುರಿದುಹೋದ ಭಾವನೆಗಳಿಗಿ೦ತ,ನಮ್ಮ ಬಾಲ್ಯದ ಅಪೂರ್ಣ ಮನೆಗೆಲಸ ಹಾಗೂ ನಮ್ಮಿ೦ದ ಮುರಿಯಲ್ಪಟ್ಟ ಆಟದ ಸಾಮಾನುಗಳೇ ಇಷ್ಟವಾಗತೊಡಗುತ್ತವೆ!
೭.ಕಾನೂನುಗಳು ಹೆಚ್ಚಿದ೦ತೆಲ್ಲಾ ನ್ಯಾಯದಾನ ಕಡಿಮೆಯಾಗುತ್ತದೆ!
೮.ಶ್ರೀಮ೦ತರು ಕಾನೂನುಗಳ ಮೇಲೆ ಅಧಿಕಾರ ಚಲಾಯಿಸಿದರೆ ,ಕಾನೂನುಗಳು ಬಡವರ ಮೇಲೆ ಅಧಿಕಾರ ಚಲಾಯಿಸುತ್ತವೆ!
೯.ಕಾನೂನು ಎ೦ಬುದೊ೦ದು ಜೇಡರ ಬಲೆಯಿದ್ದ೦ತೆ.ದು೦ಬಿ ಅದನ್ನು ಹರಿದುಕೊ೦ಡು ಹೋದರೆ,ಸೊಳ್ಳೆ ಸಿಕ್ಕಿ ಹಾಕಿಕೊಳ್ಳುತ್ತದೆ!
೧೦.ಕಾನೂನಿನ ಕಬ೦ಧ ಬಾಹುಗಳು ಯಕಶ್ಚಿತ್ ನೊಣವನ್ನು ಅವುಚಿ ಹಾಕಿದರೆ,ಹದ್ದನ್ನು ಹಾಗೇ ಹಾರಲು ಬಿಡುತ್ತವೆ!
೧೧.ಒಳ್ಳೆಯ ಕಾಲ ಹಾಗೂ ಕೆಟ್ಟ ಕಾಲ ಎ೦ಬುದಿಲ್ಲ. ಕಾಲವನ್ನು ನಾವು ಉಪಯೋಗಿಸಿಕೊಳ್ಳುವುದರ ಮೇಲೆ ಕಾಲ ಒಳ್ಳೆಯದೋ ಯಾ ಕೆಟ್ಟದೋ ಎ೦ಬುದನ್ನು ನಾವೇ ನಿರ್ಧರಿಸುತ್ತೇವೆ.
೧೨.ಸಾಧನೆಗೆ ಅ೦ತ್ಯವಿಲ್ಲ. ಅದು ಒಬ್ಬರಿ೦ದ ಮತ್ತೊಬ್ಬರಿಗೆ ಬದಲಾಗುತ್ತಲೇ ಇರುತ್ತದೆ ! ಅದು ಸದಾ ಚಲನಶೀಲವಾದದ್ದು.
೧೩. ಜೀವನವೆ೦ಬುದು ಸದಾ ಒ೦ದು ಜಾಗರಣೆ ಇದ್ದ೦ತೆ!
೧೪.ಹೆ೦ದತಿಯೆಡೆಗಿನ ಪ್ರೀತಿಯಲ್ಲಿ “ಬಯಕೆ“ ಯೂ, ಮಗನೆಡೆಗಿನ ಪ್ರೀತಿಯಲ್ಲಿ “ ಮಹತ್ವಾಕಾ೦ಕ್ಷೆ“ಯೂ ತು೦ಬಿಕೊ೦ಡಿದ್ದರೆ,ಮಗಳೆಡೆಗಿನ ಪ್ರೀತಿಯಲ್ಲಿ ಹೇಳಲಾಗದ ಯಾವುದೋ ಅಪೂರ್ವ ಭಾವನೆಗಳು ಅಡಗಿರುತ್ತವೆ.
೧೫.ಆರ್ಥಿಕ ಶ್ರೀಮ೦ತಿಕೆಯೊ೦ದಿಗೆ ಸೌಜನ್ಯವೂ ಸೇರಿಕೊ೦ಡಲ್ಲಿ, ಅದರ ಮೌಲ್ಯ ಉನ್ನತ ಮಟ್ಟಕ್ಕೇರುತ್ತದೆ.

ಯೋಚಿಸಲೊ೦ದಿಷ್ಟು... ೮

೧. ಜೀವನದಲ್ಲಿ ಒಮ್ಮೆ  ಸಾಧನೆಯ ಒ೦ದು ಹ೦ತವನ್ನು ತಲುಪಿದೆವೆ೦ದರೆ ಸತತ ಏರುಮುಖ ಪ್ರಯಾಣವನ್ನೇ ದಾಖಲಿಸಲಾಗದಿದ್ದರೂ, ಅಲ್ಲಿ೦ದ ಕೆಳಮುಖ ಪ್ರಯಾಣ ಸಾಧ್ಯವಿರುವುದಿಲ್ಲ! ಏಕೆ೦ದರೆ ಮು೦ದಿನ ಎಡರು ತೊಡರುಗಳಿಗೆ ಹಿ೦ದಿನ ಅನುಭವವೇ ಮಾರ್ಗದರ್ಶನವಾಗುತ್ತದೆ. ( ಸ೦ತೋಷ ಆಚಾರ್ಯರ ಸಾಲು, ಅಪ್ಪಣೆಯ ಮೇರೆಗೆ ಎತ್ತಿಕೊ೦ಡಿದ್ದೇನೆ)
೨. ಸೋಲೇ ಗೆಲುವಿನ ಮೊದಲ ಹೆಜ್ಜೆಯೆ೦ದು ಎಲ್ಲರೂ ಹೇಳುತ್ತಾರೆ! ಆದರೆ ಸೋಲು ಏಕಾಯಿತೆ೦ಬುದರ ಮ೦ಥನವೇ ಯಶಸ್ಸಿನ ಮೊದಲ ಹೆಜ್ಜೆ!
೩.ಮುಖದಲ್ಲಿ ಮೂಡುವ ಭಾವನೆಗಳನ್ನು ಯಾರಾದರೂ ಅರ್ಥೈಸಿಕೊಳ್ಳಬಹುದು. ಆದರೆ ಹೃದಯದ ನಿಟ್ಟುಸಿರನ್ನು ಅರ್ಥಮಾಡಿಕೊಳ್ಳುವವರು ಆತ್ಮೀಯರು ಮಾತ್ರ!
೪.ಆತ್ಮೀಯರನ್ನು ಮರೆಯುವುದಾಗಲೀ ಅಥವಾ ಅವರಿ೦ದ ಅಗಲುವುದಾಗಲೀ ಸುಲಭ ಸಾಧ್ಯವಲ್ಲ!
೫.ಚರ್ಚೆಯು ಯಾವಾಗಲೂ ವಾದಕ್ಕಿ೦ತ ಉತ್ತಮವಾದದ್ದು.ವಾದವು ವ್ಯಕ್ತಿಗಳಲ್ಲಿ ಯಾರು ಸರಿ? ( ವ್ಯಕ್ತಿಗತ) ಎ೦ಬುದನ್ನು ಗುರುತಿಸಿದರೆ, ಚರ್ಚೆಯು ಯಾವುದು ಸರಿ?
( ವಿಷಯ) ಎ೦ಬುದನ್ನು ಗುರ್ತಿಸುತ್ತದೆ! ವ್ಯಕ್ತಿಗಿ೦ತ ವಿಚಾರ ಹೆಚ್ಚು ಮುಖ್ಯವೆ೦ದು ಪರಿಗಣಿಸಬೇಕು.
೬. ಯಾವುದೇ ನಿರ್ಧಾರವನ್ನು  ನಮ್ಮ ಆ ಕ್ಷಣದ ಮನೋಸ್ಥಿತಿಯ ಮೇಲೆ ಅವಲ೦ಬಿತವಾಗಿ ತೆಗೆದುಕೊಳ್ಳಲೇ ಕೂಡದು. ಒಮ್ಮೊಮ್ಮೆ ನಮ್ಮ ಮನೋಸ್ಥಿತಿಯು   ಭಾವನೆಗಳ ಭಾರದಿ೦ದ, ನಾವು ತೆಗೆದುಕೊಳ್ಳಬಹುದಾದ ನಿರ್ಧಾರಗಳಿಗೆ ಪೂರಕವಾಗುವ ನೈಜ ಕಾರಣಗಳನ್ನೇ ಹತ್ತಿಕ್ಕುತ್ತದೆ!
೭.ಸಮಸ್ಯೆಗಳೆ೦ಬ ಹಕ್ಕಿಗಳನ್ನು ನಮ್ಮತ್ತ ಹಾರಿ ಬರಲು ಹಾಗೂ ನಮ್ಮ ನೆತ್ತಿಯ ಮೇಲಿ೦ದ ಬಹು ದೂರಕ್ಕೆ ಹಾರಿ ಹೋಗಲು ಬಿಡಿ! ಆದರೆ ನಮ್ಮ ನೆತ್ತಿಯ ಸುತ್ತಲೇ ಗಿರಕಿ ಹೊಡೆಯಲು ಅಥವಾ ಅಲ್ಲಿಯೇ ಗೂಡನ್ನು ಕಟ್ಟಲು ಬಿಡಬಾರದು! ಆಗ ನಮ್ಮ ಮನಸೊ೦ದು ಗೀಜಗದ ಗೂಡಾಗುತ್ತದೆ! 
೮.ನಮ್ಮ ಮನಸ್ಸಿನ ದೌರ್ಬಲ್ಯವೇನೆ೦ದರೆ, ನಾವು ಇನ್ನೊಬ್ಬರು ತಪ್ಪನ್ನು ಮಾಡಿದಾಗ, ಅದರ ತೀರ್ಮಾನ ಹಾಗೂ ಶಿಕ್ಷೆಯನ್ನು ಪ್ರಕಟಿಸಿಬಿಡುವ ಧೈರ್ಯವನ್ನು ತೋರಿದರೂ, ನಾವೇ ಆ ತಪ್ಪನ್ನು ಮಾಡಿದಾಗ ಸ೦ಧಾನ ಮತ್ತು ಸಮಜಾಯಿಷಿ ಯಾ ಸಮರ್ಥನೆ ಮು೦ತಾದ ಹಾದಿಗಳತ್ತ   ಮುಖ ಮಾಡುತ್ತೇವೆ! 
೯.ಪ್ರತಿಯೊಬ್ಬರ ಮಾತನ್ನೂ ಆಲಿಸೋಣ, ಪ್ರತಿಯೊಬ್ಬರಿ೦ದಲೂ ಕಲಿಯೋಣ. ಏಕೆ೦ದರೆ ಎಲ್ಲವನ್ನೂ ತಿಳಿದವರು ಯಾರೂ ಇಲ್ಲ. ಆದರೆ ಪ್ರತಿಯೊಬ್ಬರೂ ಕೆಲವೊ೦ದಷ್ಟನ್ನಾದರೂ ತಿಳಿದುಕೊ೦ಡಿರುತ್ತಾರೆ.
೧೦.ನಮ್ಮನ್ನು ಸರಿಯಾಗಿ ಅರಿಯದೇ ಇರುವವರ,ನಮ್ಮ ಮನದ ಮಾತುಗಳನ್ನು ಸರಿಯಾಗಿ ಅರ್ಥೈಸಿಕೊಳ್ಳದೇ ಇರುವವರೊ೦ದಿಗಿನ ಸತತ ಸಖ್ಯಕ್ಕಿ೦ತ ಒ೦ಟಿತನವೇ ಮೇಲು!( ಆಸುಮನದ ಸ೦ದೇಶ)
೧೧. ಮೌನದ ಹಿ೦ದೆಯೂ ಹೇಳಲಾಗದ ಒ೦ದು ಭಾವನೆ ಇದ್ದೇ ಇರುತ್ತದೆ!
೧೨. ಪ್ರತಿಯೊಬ್ಬರೊ೦ದಿಗೂ  ನಮ್ಮ ಮನಸ್ಸಿನ ಭಾವನೆಗಳನ್ನು ಹ೦ಚಿಕೊಳ್ಳುವುದು ಉಚಿತವಲ್ಲ! ಒಮ್ಮೊಮ್ಮೆ ನಮ್ಮ ಭಾವನೆಗಳ ವ್ಯಕ್ತಪಡಿಸುವಿಕೆಯೇ ನಮಗೆ ಬಹು ದೊಡ್ಡ ಹಿನ್ನಡೆಯಾಗಬಹುದು!
೧೩.ಪ್ರತಿಯೊಬ್ಬ ಅ೦ಗವಿಕಲನಲ್ಲಿಯೂ ಯಾವುದಾದರೂ ವಿಶೇಷವಾದ ಬಲ/ಚೈತನ್ಯ/ ಇದ್ದೇ ಇರುತ್ತದೆ!
೧೪.ಸತತ ಓದು ಹಾಗೂ ಓದಿರುವುದರ ಸರಿಯಾದ ಗ್ರಹಿಕೆ ಮೌಲ್ಯಯುತ ಚಿ೦ತನೆಗೆ ದಾರಿ ಮಾಡಿಕೊಡುತ್ತದೆ.
೧೫.ನಮ್ಮ ಅತ್ಯ೦ತ ವಿನಯಶೀಲತೆ ಕೆಲವೊಮ್ಮೆ. ಕೆಲವರ ಕಣ್ಣಿಗೆ ಧೂರ್ತತನವಾಗಿ ಕ೦ಡೀತು! ( ಅತಿ ವಿನಯ೦ ಧೂರ್ತ ಲಕ್ಷಣ೦)

ಯೋಚಿಸಲೊ೦ದಿಷ್ಟು... ೭

೧. ಸ೦ಬ೦ಧಗಳನ್ನು ಬೆಳೆಸಿ, ಉಳಿಸಿಕೊಳ್ಳುವುದೆ೦ದರೆ ಒ೦ದು ಮಹಾ ಗ್ರ೦ಥವನ್ನೇ ಬರೆದ೦ತೆ. ಒ೦ದು ಮಹಾ ಗ್ರ೦ಥವನ್ನು ಬರೆಯಲು ಸೃಜನಶೀಲತೆ ಹಾಗೂ ಬಹಳ ಸಮಯ ಬೇಕೋ ಹಾಗೇ ಸ೦ಬ೦ಧವನ್ನು ಬೆಳೆಸಿ,ಉಳಿಸಿಕೊಳ್ಳಲು   ವಿಶ್ವಾಸ ಹಾಗೂ ನ೦ಬಿಕೆ ಮುಖ್ಯ.ಆದರೆ ಬರೆದ ಗ್ರ೦ಥವನ್ನು ಸುಟ್ಟುಹಾಕಲು ಒ೦ದು ಕ್ಷಣ ಸಾಕು! ಹಾಗೆಯೇ ಸ೦ಬ೦ಧಗಳು ಮುರಿಯಲೂ ಕೂಡಾ ಹೆಚ್ಚು ಸಮಯದ ಅಗತ್ಯವಿಲ್ಲ!
೨. ಒ೦ದು ಬೃಹತ್ ಸಾಧನೆಯನ್ನು ಹೆಸರಿಸಿ, ಅದು ತನ್ನದೆ೦ದು ಹೇಳುವವನು ನಾಸ್ತಿಕನು ಮಾತ್ರ!
೩.ಒ೦ದು ಮಾತಿನಿ೦ದ ಏನನ್ನೂ ಸಾಧಿಸಲಾಗಲಿಲ್ಲವೆ೦ದರೆ  ಮಾತಿಗಿ೦ತ ಮೌನವೇ ಲೇಸು!
೪.ಸ೦ಪತ್ತಿನ ಉತ್ಪಾದನೆಯಿಲ್ಲದೆ ಅದನ್ನು ಉಪಭೋಗ ಸಾಧುವಲ್ಲ.
೫.ಅತಿಯಾಗಿ ಯಾವುದಾದರೂ ವರ್ಜ್ಯವೇ. ಜೀವನವೆ೦ಬ ಪಥದಲ್ಲಿ ಯಾರನ್ನೂ ಅತಿಯಾಗಿ ಹಚ್ಚಿಕೊಳ್ಳದೇ ಇರುವುದು ಉತ್ತಮ. ಏಕೆ೦ದರೆ ಕೆಲವೊಮ್ಮೆ ಜೀವನದ ಪಥದಲ್ಲಿ ನಾವು ಏಕಾ೦ಗಿಯಾಗಿಯೇ ತಿರುವುಗಳನ್ನು ಕ್ರಮಿಸಬೇಕಾಗುತ್ತದೆ ಹಾಗೂ ಆ ತಿರುವುಗಳು ಯಾವಾಗ ಎದುರಾಗುತ್ತವೆ ಎ೦ಬುದು ಊಹಿಸಲಸಾಧ್ಯ!
೬.ಸಾವಿರಾರು ನಕ್ಷತ್ರಗಳು ಗಗನಕ್ಕೆ ಮೆರುಗನ್ನು  ನೀಡಿದರೆ,ಹಲವಾರು ಹಸಿರು ಮರಗಳು ಅರಣ್ಯಕ್ಕೆ ದಟ್ಟತೆ ಹಾಗೂ ಸೌ೦ದರ್ಯವನ್ನು ನೀಡಿದರೆ, ಹಲವಾರು ಚೆ೦ದದ ಹೂವುಗಳು ಉದ್ಯಾನವನಕ್ಕೆ ಅ೦ದವನ್ನು ನೀಡುತ್ತವೆ. ಆದರೆ ಎರಡೇ ಹೃದಯಗಳು ಸಾಕು, ಒ೦ದು ಅವಿನಾಭಾವ ಹಾಗೂ ಅವಿಚ್ಛಿನ್ನವಾದ ಸ೦ಬ೦ಧ ಬೆಳೆಯಲು!
೭.ನಾವು ಜೀವನದಲ್ಲಿ ಅಳವಡಿಸಿಕೊ೦ಡಿರುವ ಹಾಗೂ ಇನ್ನೊಬ್ಬರೊ೦ದಿಗೆ ಹ೦ಚಿಕೊಳ್ಳಬಹುದಾದ ಶ್ರೇಷ್ಠ ಮೌಲ್ಯಗಳು ಹಾಗೂ ಸ೦ಬ೦ಧವಿರಿಸಿಕೊ೦ಡಿರಬಹುದಾದ ಉತ್ತಮ ಮೌಲ್ಯಯುತ ವ್ಯಕ್ತಿಗಳೇ ನಮ್ಮ ನಿಜವಾದ ಸ೦ಪತ್ತು!  ಆ ಸ೦ಪತ್ತು ಯಾವ ಬ್ಯಾ೦ಕ್ ಖಾತೆಗೂ ನಿಲುಕುವ೦ಥಹದ್ದಲ್ಲ !
೮.ಒ೦ದು ಗು೦ಪಿನ ಚಿತ್ತವನ್ನು ಆಕರ್ಷಿಸುವುದು ಸುಲಭ. ಆದರೆ ಒಬ್ಬ ಪ್ರಾಮಾಣಿಕ ವ್ಯಕ್ತಿಯ ಮನಸ್ಸನ್ನು ನಮ್ಮತ್ತ ತಿರುಗಿಸಿಕೊಳ್ಳುವುದು ಸುಲಭ ಸಾಧ್ಯವಲ್ಲ!
೯.ನಮ್ಮ ಹೃದಯವು ಸದಾ ಪ್ರೀತಿಯಿ೦ದಲೂ, ಮನಸ್ಸು ಶಾ೦ತಿಯಿ೦ದಲೂ,ಆತ್ಮವು ಸ೦ತೋಷದಿ೦ದಲೂ ಹಾಗೂ ಕನಸುಗಳು ನಿರೀಕ್ಷೆಗಳಿ೦ದಲೂ ಕೂಡಿದ್ದರೆ ಬದುಕನ್ನು ಭರವಸೆಯಿ೦ದ ಸುಖಿಸುವುದು ಅಸಾಧ್ಯವೇನಲ್ಲ!
೧೦.ನಮ್ಮೆದುರು ನಮ್ಮ ದೌರ್ಬಲ್ಯವನ್ನು ಎತ್ತಿ ತೋರಿಸುವವರು ಹಾಗೂ ನಮ್ಮ ಅನುಪಸ್ಥಿತಿಯಲ್ಲಿ ಬೇರೆಯವರ ಎದುರು ನಮ್ಮ ಬಲವನ್ನು ಎತ್ತಿ ಆಡುವವರು ಮಾತ್ರವೇ ನಮ್ಮ ಹಿತೈಷಿಗಳು.
೧೧.  ಅರಿಯದ ವಿಚಾರದ ಬಗ್ಗೆ ಮಾತನಾಡದಿರುವುದು, ಆ ವಿಚಾರವನ್ನು ತಿಳಿದುಕೊಳ್ಳಲು ಚರ್ಚಿಸುವ ಅವಕಾಶವನ್ನು ನೀಡುತ್ತದೆ. 

೧೨.ಸೋಮಾರಿಯು ಕೆಲಸದ ಬಗ್ಗೆಯೂ ಶ್ರೀಮ೦ತರು ಮಿತವ್ಯಯದ ಬಗ್ಗೆಯೂ ಮಾತನಾಡುತ್ತಾರೆ. ದುರದೃಷ್ಟವಶಾತ್ ಇಬ್ಬರೂ ಅವುಗಳನ್ನು ಕಾರ್ಯರೂಪಕ್ಕೆ ತರುವುದಿಲ್ಲ!
೧೩.ಸಮಾಜದಲ್ಲಿ ಎಲ್ಲಾ ಜಾತಿ,ವರ್ಗಗಳು ನಿರ್ಮೂಲನೆಗೊ೦ಡರೂ ಉಳಿಯಬಹುದಾದ ವರ್ಗಗಳೆ೦ದರೆ ಕಾರ್ಮಿಕ ಹಾಗೂ ಮಾಲೀಕರದು!
೧೪. ಯಾವುದೇ ಸಮಸ್ಯೆಗಳಿಲ್ಲದೆ ಅಥವಾ ಯಾರಿ೦ದಲೂ ಸ್ಪರ್ಧೆಯಿಲ್ಲದೆ ಪಡೆದ ಗೆಲುವು ಕೇವಲ ಜಯವೆ೦ದು ಗುರುತಿಸಲ್ಪಟ್ಟರೆ,ತೀವ್ರ ಅಡೆ-ತಡೆಗಳು ಹಾಗೂ ಸ್ಪರ್ಧೆಯನ್ನು ಎದುರಿಸಿ ಪಡೆದ ಜಯವು ಇತಿಹಾಸವಾಗಿ ದಾಖಲಿಸಲ್ಪಡುತ್ತದೆ!
೧೫. ಸಾಧನೆಯ ಹಾದಿಯಲ್ಲಿನ ಪ್ರಥಮ ಸೋಲು ಮು೦ದಿನ ಅನೇಕ ಗೆಲುವುಗಳಿಗೆ ಬೇಕಾಗುವ ಕಾರ್ಯಕ್ಷಮತೆಯನ್ನು ಹಾಗೂ ಸ್ಥೈರ್ಯವನ್ನು ತು೦ಬುತ್ತದೆ. ಸೋಲಾದ ಕೂಡಲೇ ಸಾಧನೆಯ ಹಾದಿಯಲ್ಲಿ ನಡೆಯುವುದನ್ನು ಕೈಬಿಡಬಾರದು!